Chikkodi

ರೈತ ಕುಟುಂಬದ ಅಪರೂಪದ ಪ್ರಾಣಿ ಪ್ರೀತಿ: ಗರ್ಭಿಣಿ ಹಸುವಿಗೆ ಸಂಪ್ರದಾಯಬದ್ಧ ಸೀಮಂತ!

Share

ರೈತರು ತಮ್ಮ ಮನೆಯ ಜಾನುವಾರುಗಳನ್ನು ಬರಿ ಮೂಕ ಪ್ರಾಣಿಗಳಂತೆ ನೋಡದೆ, ಕುಟುಂಬದ ಸದಸ್ಯರಂತೆ ಪ್ರೀತಿಸಿ ಸಲಹುತ್ತಾರೆ ಎಂಬುದಕ್ಕೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸಾಕ್ಷಿಯೊಂದು ದೊರೆತಿದೆ. ಇಲ್ಲಿನ ಗಣಪತಿ ಮಹಾದೇವ ಸಾಂಗಾವೆ ಎಂಬ ರೈತ ಕುಟುಂಬವು ತಾವು ಸಾಕಿದ ‘ಗೌರಿ’ ಎಂಬ ಹಸುವಿಗೆ ಹೆಣ್ಣುಮಗಳಿಗೆ ಮಾಡುವಂತೆಯೇ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿ ತಮ್ಮ ಅಪಾರ ಗೋಪ್ರೇಮವನ್ನು ಮೆರೆದಿದ್ದಾರೆ.

ಪ್ರಸ್ತುತ ೭ ತಿಂಗಳ ತುಂಬು ಗರ್ಭಿಣಿಯಾಗಿರುವ ‘ಗೌರಿ’ ಆಕಳಿಗೆ ಬಣ್ಣ ಬಣ್ಣದ ಸೀರೆ ಉಡಿಸಿ, ಹೂಮಾಲೆ ಹಾಕಿ, ಬಳೆ ತೊಡಿಸಿ ತಾಯಂದಿರಂತೆ ಶೃಂಗಾರಗೊಳಿಸಲಾಗಿತ್ತು. ಯಾವುದೇ ಗರ್ಭಿಣಿ ಮಹಿಳೆಗೆ ಮಾಡುವ ಸೀಮಂತಕ್ಕಿಂತ ಕಡಿಮೆ ಇಲ್ಲದಂತೆ ಅತ್ಯಂತ ಸಂಭ್ರಮದಿಂದ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ಅರ್ಚಕ ಬಾಬಾಸಾಹೇಬ ಡವರಿ ಹಾಗೂ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ರೈತ ಮಾಲೀಕರಾದ ಸುವರ್ಣಾ ಗಣಪತಿ ಸಾಂಗಾವೆ, ಪಲ್ಲವಿ ಶುಭಂ ಸಾಂಗಾವೆ ದಂಪತಿ, ರಚನಾ ಕಾಮತ, ನಿರ್ಮಲಾ ಸಾಂಗಾವೆ, ಉಜ್ವಲಾ ನಂದನಗೆ ಸೇರಿದಂತೆ ಹಲವರು ಗೋಮಾತೆಗೆ ಪ್ರಥಮ ಪೂಜೆ ಸಲ್ಲಿಸಿ ಉಡಿ ತುಂಬಿದರು. ಸುಮಂಗಲೆಯರು ಮಂಗಳಾರತಿ ಬೆಳಗಿ, ಜಾನಪದ ಹಾಡುಗಳನ್ನು ಹಾಡುತ್ತಾ ಗೌರಿಗೆ ಶುಭ ಹಾರೈಸಿದರು.

ಈ ವಿಶಿಷ್ಟ ಸೀಮಂತ ವೈಭವಕ್ಕೆ ಸಾಂಗಾವೆ ಕುಟುಂಬದ ಜೊತೆಗೆ ಗ್ರಾಮದ ಹಿರಿಯರು, ನೆಂಟರು ಹಾಗೂ ನೆರೆಹೊರೆಯವರು ಸಾಕ್ಷಿಯಾದರು. ಶಂಕರ ರೇಂದಾಳೆ, ಬಾಳು ಸಾಂಗಾವೆ, ವಿಷ್ಣು ಬುಬನಾಳೆ, ಪುಂಡಲೀಕ ಬುಬನಾಳೆ, ಅರುಣ ಮಾಳಿ, ಡಾ. ಬಾಳಾಸಾಹೇಬ ಚಿಕಲೆ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ಮೃಷ್ಠಾನ್ನ ಭೋಜನ ಸವಿದು ಗೋಮಾತೆಯ ಆಶೀರ್ವಾದ ಪಡೆದರು.

 

ಸಾಂಗಾವೆ ಕುಟುಂಬದ ಈ ಅಪರೂಪದ ಕಾರ್ಯಕ್ರಮವು ಗಡಿಭಾಗದಲ್ಲಿ ಪ್ರಾಣಿ ದಯೆ ಮತ್ತು ಗ್ರಾಮೀಣ ಸಂಸ್ಕೃತಿಯ ಸೌಂದರ್ಯವನ್ನು ಎತ್ತಿಹಿಡಿದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!