State

ಪಕ್ಷದ ಹಿತಕ್ಕಾಗಿ ರಾಜೀನಾಮೆ ಹಿಂಪಡೆಯಿರಿ: ಬೆಂಬಲಿಗರಿಗೆ ಸಚಿವ ಎಚ್.ಕೆ. ಪಾಟೀಲ್ ಮನವಿ

Share

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರ ರಾಜೀನಾಮೆ ಪರ್ವದ ನಡುವೆ ಹಿರಿಯ ನಾಯಕ, ಸಚಿವ ಎಚ್.ಕೆ. ಪಾಟೀಲ್ ಅವರು ಮಹತ್ವದ ಮನವಿ ಮಾಡಿದ್ದಾರೆ. ಪಕ್ಷದ ಹಿತೈಷಿಗಳು ಹಾಗೂ ಕಾರ್ಯಕರ್ತರ ಭಾವನೆಗಳಿಗೆ ನಾನು ಸಂಪೂರ್ಣ ಗೌರವ ನೀಡುತ್ತೇನೆ ಎಂದಿರುವ ಅವರು, ಮುನ್ಸಿಪಾಲಿಟಿ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೀಡಿರುವ ರಾಜೀನಾಮೆಗಳನ್ನು ತಕ್ಷಣವೇ ಹಿಂಪಡೆಯುವಂತೆ ವಿನಂತಿಸಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್.ಕೆ. ಪಾಟೀಲ್, “ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ನಾಯಕರು ಮತ್ತು ಹಿತೈಷಿಗಳಲ್ಲಿ ಕೆಲ ನೋವುಗಳಿರಬಹುದು. ಆದರೆ, ಯಾವುದೇ ನೋವುಗಳಿದ್ದರೂ ಅದನ್ನು ಬದಿಗಿಟ್ಟು ನಮ್ಮ ಪಕ್ಷದ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು” ಎಂದು ಕರೆ ನೀಡಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಎಐಸಿಸಿ (AICC) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಕೆಪಿಸಿಸಿ (KPCC) ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸವಿಸ್ತಾರವಾಗಿ ಮಾತುಕತೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸಂಪುಟ ಪುನಾರಚನೆ ಹಾಗೂ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಎದ್ದಿರುವ ನಾನಾ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, “ಎಲ್ಲಾ ರಾಜಕೀಯ ಪ್ರಶ್ನೆಗಳಿಗೂ ಮೌನವೇ ನನ್ನ ಉತ್ತರ” ಎಂದು ಹೇಳುವ ಮೂಲಕ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಹೈಕಮಾಂಡ್ ನಾಯಕರ ಸೂಚನೆಯಂತೆ ಪಕ್ಷ ಮತ್ತು ಸರ್ಕಾರದ ಹಿತ ಕಾಯುವುದೇ ಎಲ್ಲರ ಮುಖ್ಯ ಗುರಿಯಾಗಬೇಕು ಎಂದು ಅವರು ತಮ್ಮ ಬೆಂಬಲಿಗರಿಗೆ ಕಿವಿಮಾತು ಹೇಳಿದ್ದಾರೆ.

Tags:

error: Content is protected !!