ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಸಿಗದ ಶಾಸಕರಲ್ಲಿ ಅಸಮಾಧಾನ ಮೂಡಿದೆ ಎಂಬ ಚರ್ಚೆಗಳ ನಡುವೆ, ಸಚಿವ ಲಕ್ಷ್ಮಣ್ ಸವದಿ ಅವರು ಪ್ರಮುಖ ಸ್ಪಷ್ಟನೆ ನೀಡಿದ್ದಾರೆ. ಕಾರವಾರ ಜಿಲ್ಲೆಯ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಾರವಾರದಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿ ವೀಕ್ಷಣೆ ನಡೆಸಿ ಮಾತನಾಡಿದ ಅವರು, ಈ ವಿಚಾರವಾಗಿ ಸ್ವತಃ ಜಿಲ್ಲೆಯ ಶಾಸಕರೇ ತಮಗೆ ಕರೆ ಮಾಡಿ ಮಾತನಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ, “ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಜಿಲ್ಲೆಯ ಯಾವುದೇ ಶಾಸಕರು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರೋಣ ಎಂದು ಜಿಲ್ಲೆಯ ಶಾಸಕರೇ ನನಗೆ ಕರೆ ಮಾಡಿ ಹೇಳಿದ್ದಾರೆ” ಎಂದರು. ಅಲ್ಲದೆ ತಮ್ಮ ಉದಾಹರಣೆ ನೀಡಿದ ಅವರು, “ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು, ಆ ಬಳಿಕ ಇರಲಿಲ್ಲ. ಆದರೂ ನಾವು ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಅಧಿಕಾರ ಮತ್ತು ಅವಕಾಶಗಳು ಬರುತ್ತವೆ, ಹೋಗುತ್ತವೆ; ಅವುಗಳನ್ನು ಸರಿಯಾಗಿ ಸ್ವೀಕರಿಸಿ ಮುಂದೆ ಸಾಗಬೇಕು” ಎಂದು ಮಾರ್ಮಿಕವಾಗಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಸಿಎಂ ಸೂಚನೆಯಂತೆ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿಯೂ ಸಚಿವರ ಪ್ರವಾಸ ಆರಂಭಗೊಂಡಿದೆ ಎಂದು ತಿಳಿಸಿದ ಅವರು, ಕಾರವಾರದ 6 ಕ್ಷೇತ್ರಗಳಲ್ಲಿ ಇಂದು ಮತ್ತು ನಾಳೆ ಅತಿವೃಷ್ಠಿ ಹಾಗೂ ಅನಾವೃಷ್ಠಿ ಅಧ್ಯಯನ ನಡೆಸಿ ಸಿಎಂಗೆ ವರದಿ ಸಲ್ಲಿಸುವುದಾಗಿ ಹೇಳಿದರು. ಇನ್ನು ಮಾಜಿ ಸಚಿವ ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಅಧಿವೇಶನದಲ್ಲಿ ಹೋರಾಟಕ್ಕೆ ಕರೆ ನೀಡಿರುವುದಕ್ಕೆ ತಿರುಗೇಟು ನೀಡಿದ ಸವದಿ, “ನಾನು 25 ವರ್ಷಗಳ ಕಾಲ ಬಿಜೆಪಿಯಲ್ಲೇ ಇದ್ದು ಎಲ್ಲವನ್ನೂ ಹತ್ತಿರದಿಂದ ನೋಡಿದ್ದೇನೆ. ಈಗ ಈ ಬಗ್ಗೆ ಚರ್ಚೆ ಬೇಡ, ಅವರು ಹೋರಾಟಕ್ಕೆ ಬಂದಾಗ ನಾವೂ ತಕ್ಕ ಉತ್ತರ ನೀಡುತ್ತೇವೆ” ಎಂದು ಎಚ್ಚರಿಸಿದರು.
