ಬೆಳಗಾವಿಯ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸರ್ವರ್ ಸಮಸ್ಯೆ ತಲೆದೋರಿದ್ದು, ಚಿಕಿತ್ಸೆಗಾಗಿ ಆಗಮಿಸಿದ ನೂರಾರು ರೋಗಿಗಳು ತೀವ್ರ ಪರದಾಡುವಂತಾಗಿದೆ.


ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯಲ್ಲಿ ಸರ್ವರ್ ಸಮಸ್ಯೆ ಮುಂದುವರಿದಿದ್ದು, ಗುರುವಾರ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿತು.
ಆಸ್ಪತ್ರೆಯಲ್ಲಿ ಇ- ಹಾಸ್ಪಿಟಲ್ ನೆಕ್ಸ್ಟ್ ಜಿನ್ ಹೊಸ ಸಾಫ್ಟ್ವೇರ್ ಅಪ್ಡೇಟ್ ನಂತರ ನೋಂದಣಿ ಹಾಗೂ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು, ಬೆಳಗ್ಗೆಯಿಂದಲೇ ಓಪಿಡಿ ಚೀಟಿ ಪಡೆಯಲು ನೂರಾರು ರೋಗಿಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.
ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ, ಶುಗರ್ ಟೆಸ್ಟ್, ಎಕ್ಸ್ರೇ, ಇಕೋ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಮೊದಲು ಬಿಲ್ ಪಾವತಿಸುವುದು ಕಡ್ಡಾಯವಾಗಿದ್ದು, ಸರ್ವರ್ ಸಮಸ್ಯೆಯಿಂದ ಬಿಲ್ಲಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪರಿಣಾಮ, ರೋಗಿಗಳು ನಾಲ್ಕೈದು ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಬಿಲ್ ಪಾವತಿಯಾದ ಬಳಿಕವೇ ವೈದ್ಯರು ಚಿಕಿತ್ಸೆಯನ್ನು ಆರಂಭಿಸುತ್ತಿದ್ದಾರೆ.

ಬೆಳಗಾವಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಚಿಕಿತ್ಸೆಗಾಗಿ ಆಗಮಿಸಿದ ಬಡ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲೇ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ವಯೋವೃದ್ಧರು, ಮಹಿಳೆಯರು ಮತ್ತು ತುರ್ತು ಚಿಕಿತ್ಸೆ ಅಗತ್ಯವಿದ್ದ ರೋಗಿಗಳು ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ.

“ಗಂಟೆಗಟ್ಟಲೆ ಕಾಯುವ ವೇಳೆ ರೋಗಿಯ ಆರೋಗ್ಯದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅದರ ಹೊಣೆ ಯಾರು?” ಎಂದು ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ಬಿಮ್ಸ್ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ವರ್ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿ, ಆಸ್ಪತ್ರೆಯ ಸೇವೆಯನ್ನು ಸುಗಮಗೊಳಿಸುವಂತೆ ಸಾರ್ವಜನಿಕರು ಹಾಗೂ ರೋಗಿಗಳು ಬಿಮ್ಸ್ ಆಡಳಿತವನ್ನು ಒತ್ತಾಯಿಸಿದ್ದಾರೆ.
