ರಾಜ್ಯ ಸರ್ಕಾರದ ನೂತನ ಸಚಿವ ವಿಜಯಾನಂದ ಕಾಶಪ್ಪನವರ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಎಂದು ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಸಹ ಶಿಕ್ಷಕನೋರ್ವನನ್ನು ಅಮಾನತ್ತಗೊಳಿಸಲಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಆನಂದ ಕೆಂಭಾವಿ ಅಮಾನತ್ತಾದ ಶಿಕ್ಷಕ. ಸಚಿವ ಸಂಪುಟ ರಚನೆ ಹಿನ್ನೆಲೆ ನೂತನ ಸಚಿವರಾಗಿ ಕಾಶಪ್ಪನವರ ಪ್ರಮಾಣ ವಚನ ಸ್ವೀಕರಿಸುವಾಗಿನ ಫೋಟೊ ವಾಟ್ಸಾಪ್ ಆಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಶಿಕ್ಷಕ ಕೆಂಭಾವಿ ಹರಿಬಿಟ್ಟಿದ್ದನು.
ಈ ಕುರಿತು ಗ್ರಾಮಸ್ಥರು ಇಂಡಿ ಬಿಇಒ ಅವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಬಿಇಒ ಅವರ ಶಿಫಾರಸ್ಸಿನ ಮೇರೆಗೆ ಸಹ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಡಿಡಿಪಿಐ ಮಂಜುನಾಥ ಗುಳೇದಗುಡ್ಡ ಸ್ಪಷ್ಟಪಡಿಸಿದ್ದಾರೆ.
