Vijaypura

ಶಾಲಾ ಮಕ್ಕಳನ್ನು ಹತ್ತಿಸದೇ ಹೋದ ಬಸ್ ಚಾಲಕ; ಸಚಿವ ಎಂ.ಬಿ. ಪಾಟೀಲ್ ಫುಲ್ ಗರಂ

Share

ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ತೆರಳಿದ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯದ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಬಳಿ ನಿನ್ನೆ ಸಂಜೆ ಘಟನೆ ನಡೆದಿದೆ. ಕಿಲಾರಹಟ್ಟಿ–ಮಮದಾಪುರ ಮಾರ್ಗದಲ್ಲಿ ಸರ್ಕಾರಿ ಬಸ್‌ಗಾಗಿ ನೂರಕ್ಕೂ ಹೆಚ್ಚು ಶಾಲಾ ಮಕ್ಕಳು ರಸ್ತೆ ಬದಿಯಲ್ಲಿ ಕಾಯುತ್ತಿದ್ದರೂ, ಬಸ್ ಚಾಲಕ ಮಕ್ಕಳನ್ನು ಹತ್ತಿಸಿಕೊಳ್ಳದೇ ತೆರಳಿದ್ದಾನೆ ಎನ್ನಲಾಗಿದೆ.
ಮಾರ್ಗ ಮಧ್ಯೆ ಮಕ್ಕಳನ್ನು ಕಂಡ ಸಚಿವ ಎಂ.ಬಿ. ಪಾಟೀಲ್, ವಾಹನ ನಿಲ್ಲಿಸಿ ಅವರ ಸಮಸ್ಯೆ ಆಲಿಸಿದರು. ಈ ವೇಳೆ ಸಾರಿಗೆ ಸಿಬ್ಬಂದಿಯಿಂದ ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು.

ತಕ್ಷಣವೇ ಸ್ಥಳದಿಂದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎ. ಬಿರಾದಾರ್ ಅವರಿಗೆ ಕರೆ ಮಾಡಿದ ಸಚಿವರು, ಚಾಲಕನ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನೂರು ಜನ ಶಾಲಾ ಮಕ್ಕಳು ನಿಂತಿದ್ದಾರೆ, ಬಸ್ ನಿಲ್ಲಿಸದೇ ಹೋಗುವುದೇ? ಚಾಲಕನಿಗೆ ಸೊಕ್ಕಾ?” ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳನ್ನು ಹತ್ತಿಸಿಕೊಳ್ಳದೇ ಹೋದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯವಿದ್ದರೆ ಚಾಲಕನನ್ನು ಅಮಾನತುಗೊಳಿಸುವಂತೆ ಸಚಿವರು ಸೂಚಿಸಿದರು. ಕೂಡಲೇ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ ಅವರು, ವಿಭಾಗೀಯ ನಿಯಂತ್ರಣಾಧಿಕಾರಿಯೇ ಮಮದಾಪುರಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.
“ಈ ಘಟನೆ ನನಗೆ ಮುಜುಗರ ತಂದಿದೆ. ನಿಮ್ಮ ಸಮಸ್ಯೆ ಬಗೆಹರಿಸಲಾಗುತ್ತದೆ” ಎಂದು ಸಚಿವ ಎಂ.ಬಿ. ಪಾಟೀಲ್ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

Tags:

error: Content is protected !!