Vijaypura

ಬಿಡದಿ ಟೌನ್‌ಶಿಪ್ ವಿರುದ್ಧದ ವಿಪಕ್ಷೀಯರ ಹೋರಾಟ ರಾಜಕೀಯ ಪ್ರೇರಿತ ; ಸಚಿವ ಎಂ.ಬಿ. ಪಾಟೀಲ್ ಆಕ್ರೋಶ

Share

ಬಿಡದಿ ಟೌನ್‌ಶಿಪ್ ಯೋಜನೆಯ ವಿರುದ್ಧದ ಹೋರಾಟ ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆಗೆ ಜನ್ಮ ನೀಡಿದ್ದೇ ಎಚ್.ಡಿ. ಕುಮಾರಸ್ವಾಮಿ, ಈಗ ಅವರೇ ರೈತರನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರೇ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಕಳೆದ 20 ವರ್ಷಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗ ಈ ಯೋಜನೆಯನ್ನು ಕ್ಯಾಬಿನೆಟ್‌ನಲ್ಲಿ ಕೈಬಿಡಲು ಆಗಲಿಲ್ಲವೇ ಎಂದು ಪ್ರಶ್ನಿಸಿದರು. ಜನ್ಮ ಕೊಟ್ಟವರೇ ಈಗ ಹೋರಾಟ ಮಾಡುತ್ತಿದ್ದು, ಇದು ತೊಟ್ಟಿಲು ತೂಗಿ ಮಗುವನ್ನು ಚಿವುಟುವಂತಿದೆ. ಆ ಭಾಗದ ರೈತರನ್ನು ಎತ್ತಿಕಟ್ಟಿ ಆಡಳಿತ ಮುಜುಗರಕ್ಕೆ ಈಡುಮಾಡುವುದು ಅವರ ಉದ್ದೇಶವಾಗಿದೆ, ಆದರೆ ಇದನ್ನು ನಿಭಾಯಿಸಲು ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ವಿಜಯೇಂದ್ರ ಹಾಗೂ ಮಧು ಬಂಗಾರಪ್ಪ ನಡುವಿನ ಸಂಭಾಷಣೆ ಉಲ್ಲೇಖಿಸಿದ ಅವರು, ಹೋರಾಟ ಮಾಡುವವರೇ ಪರಿಹಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸತ್ಯ ಹೊರಬಿದ್ದಿದೆ ಎಂದರು. ಹೆಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜಮೀನಿನ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಅನಿತಾ ಕುಮಾರಸ್ವಾಮಿ ಅವರು ತಮಗೆ ಸಹೋದರಿಯಿದ್ದಂತೆ, ಹೆಣ್ಣುಮಕ್ಕಳ ವಿಚಾರದಲ್ಲಿ ತಾವು ಮಾತನಾಡುವುದಿಲ್ಲ ಎಂದು ಹೇಳಿದರು. ಜಮೀನು ನೀಡಲು ಸ್ವಇಚ್ಛೆಯಿಂದ ಮುಂದೆ ಬರುವವರನ್ನು ತಡೆಯಲು ಸಾಧ್ಯವಿಲ್ಲ, ಇದು ಮುಂಬರುವ ಚುನಾವಣೆಗೆ ರಾಜಕೀಯ ಲಾಭ ಪಡೆಯುವ ತಂತ್ರವಷ್ಟೇ ಎಂದು ವ್ಯಂಗ್ಯವಾಡಿದರು.

Tags:

error: Content is protected !!