ಕಾರ್ಮಿಕರ ಕನಿಷ್ಠ ವೇತನ ಜಾರಿ ಹಾಗೂ ರೈತರ ಭೂಮಿ ರಕ್ಷಣೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ‘ಜೈಲ್ ಭರೋ’ ಚಳವಳಿ ನಡೆದಿದೆ. ನಗರದಲ್ಲಿ ಬೃಹತ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬೆಳಗಾವಿ ನಗರದಲ್ಲಿ CITU ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜೈಲ್ ಭರೋ’ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕನಿಷ್ಠ ವೇತನ ಮತ್ತು ರೈತರ ಹಕ್ಕುಗಳಿಗಾಗಿ ಆಗ್ರಹಿಸಿ ವಿವಿಧ ವಲಯದ ನೂರಾರು ಕಾರ್ಮಿಕರು ಬೃಹತ್ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡರಾದ ಮಂದಾ ನೇವಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇ 22 ರಂದು ನೀಡಿದ್ದ ಕನಿಷ್ಠ ವೇತನ ಆಶ್ವಾಸನೆ ಇಂದಿಗೂ ಈಡೇರಿಲ್ಲ ಎಂದು ಕಿಡಿಕಾರಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರ ಸಂಪುಟ ಚರ್ಚೆಯ ನೆಪ ಹೇಳಿ ಕಾಲಹರಣ ಮಾಡುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರೈತರ ಭೂಮಿಯನ್ನು ಕಿತ್ತುಕೊಂಡು ಅದಾನಿ ಹಾಗೂ ಅಂಬಾನಿಯಂತಹ ಬೃಹತ್ ಕಾರ್ಪೊರೇಟ್ ಕಂಪನಿಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ರೈತರ ಸಾಗುವಳಿ ಭೂಮಿಯನ್ನು ತಕ್ಷಣವೇ ರಕ್ಷಿಸಬೇಕೆಂದು ಒತ್ತಾಯಿಸಿದರು. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಮಿಕರ ಮತ್ತು ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
