ಕಳೆದ ಎರಡು ದಶಕಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಮರಿಗೇರಿ ಗ್ರಾಮದ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಕಿತ್ತೂರಿನಲ್ಲಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ವಿದ್ಯಾರ್ಥಿಗಳು ಮತ್ತು ಕಬ್ಬು ಬೆಳಗಾರರ ಒಕ್ಕೂಟದಿಂದ ನಡೆದ ಈ ಪ್ರತಿಭಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಮರಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕಳೆದ ಇಪ್ಪತ್ತು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಕಬ್ಬು ಬೆಳಗಾರರ ಸಂಘದ ನೇತೃತ್ವದಲ್ಲಿ ಕಿತ್ತೂರು ಚೆನ್ನಮ್ಮನ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾ ಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ಗುಂಡಿಗಳಿಂದ ಕೂಡಿದ್ದು ಓಡಾಡಲು ನರಕಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಸ್ತೆ ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಮಸ್ಯೆ ಕುರಿತು ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ರಸ್ತೆ ಹದಗೆಟ್ಟಿದ್ದರಿಂದ ನಿತ್ಯ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ರೈತರು ಭಾರಿ ತೊಂದರೆ ಅನುಭವಿಸುತ್ತಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ರಸ್ತೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
