ಬೆಳಗಾವಿಯ ಸಂಗಮೇಶ್ವರ ನಗರದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ರಕ್ಷಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬುಡಾದಿಂದ ಇಪ್ಪತ್ತೈದು ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ಬುಡಾ ಅಧ್ಯಕ್ಷ ಆಸೀಫ್ ಸೇಠ್ ಅವರು ಇಂದು ಉದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನು ನೀಡಿದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಗೂ ಶಾಸಕ ಆಸೀಫ್ ಸೇಠ್ ಅವರು ಸಂಗಮೇಶ್ವರ ನಗರದಲ್ಲಿ ಸಾರ್ವಜನಿಕ ಸ್ಥಳದ ಒತ್ತುವರಿ ತಡೆಯಲು ಮತ್ತು ಸ್ಥಳೀಯರ ಅನುಕೂಲಕ್ಕಾಗಿ ಕಾಂಪೌಂಡ್ ನಿರ್ಮಾಣ, ಪೇವರ್ಸ್ ಅಳವಡಿಕೆ ಹಾಗೂ ಜಿಮ್ ಉಪಕರಣಗಳ ಉದ್ಯಾನ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಬದಲಿಗೆ ಸ್ಥಳೀಯರ ಕರ್ತವ್ಯವೂ ಹೌದು ಎಂದು ಅವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಮಹತ್ವದ್ದಾಗಿದೆ.
ನಗರದಲ್ಲಿ ಅರ್ಧಕ್ಕೆ ನಿಂತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗಳು ಆರಂಭವಾಗಿವೆ. ಸಾರ್ವಜನಿಕರಿಂದ ಹೆಲ್ಪ್ಲೈನ್ ಮೂಲಕ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರ ಒದಗಿಸಲಾಗುತ್ತಿದ್ದು, ಮುಂಬರುವ ಗಣೇಶ ಚತುರ್ಥಿಗೂ ಮುನ್ನ ನಗರದ ಎಲ್ಲ ರಸ್ತೆಗಳನ್ನು ಸುಸ್ಥಿತಿಗೆ ತರಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಇಮ್ರಾನ್ ಫತೇಖಾನ್, ನಗರಸೇವಕ ಶ್ರೇಯಸ್ ನಾಕಾಡಿ, ಬುಡಾ ಅಭಿಯಂತರರಾದ ಮಂಜುಶ್ರೀ, ಬಾಬಾಜಾನ್ ಪಠಾಣ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
