ಕರ್ನಾಟಕ ಪೊಲೀಸ್ ಪಡೆಗೆ ಅತ್ಯಾಧುನಿಕ ತರಬೇತಿ ನೀಡುವ ಮೂಲಕ ಆಂತರಿಕ ಭದ್ರತೆಯನ್ನು ಬಲಪಡಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಾಣಿಕ್ ಶಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸಾಮರ್ಥ್ಯ ವೃದ್ಧಿ ತರಬೇತಿಗೆ ಚಾಲನೆ ಸಿಕ್ಕಿದ್ದು, ತುರ್ತು ಸ್ಪಂದನಾ ಪಡೆಯ ಅಣಕು ಕಾರ್ಯಾಚರಣೆ ಎಲ್ಲರ ಗಮನ ಸೆಳೆಯಿತು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಹಮ್ಮಿಕೊಳ್ಳಲಾಗಿರುವ ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿಗೆ ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆಯನ್ನು ನೀಡಿದ್ದು, ರಾಜ್ಯದ ಪೊಲೀಸ್ ಇಲಾಖೆಯನ್ನು ಯಾವುದೇ ರೀತಿಯ ತುರ್ತು ಹಾಗೂ ಅಹಿತಕರ ಪರಿಸ್ಥಿತಿಗಳನ್ನು ಎದುರಿಸಲು ಸಜ್ಜುಗೊಳಿಸುವ ಪ್ರಮುಖ ಹೆಜ್ಜೆಯಿದಾಗಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಹ್ಯಾರಿಸ್, ಎನ್ಎಸ್ಜಿ ಡೈರೆಕ್ಟರ್ ಜನರಲ್ ಭೃಗು ಶ್ರೀನಿವಾಸನ್, ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಉದ್ಘಾಟನೆ ಬಳಿಕ ಅಹಿತಕರ ಘಟನೆಗಳು ಮತ್ತು ಭಯೋತ್ಪಾದಕ ದಾಳಿಯಂತಹ ತುರ್ತು ಸಂದರ್ಭಗಳನ್ನು ಎದುರಿಸಲು ತುರ್ತು ಸ್ಪಂದನಾ ಪಡೆ ನಡೆಸಿದ ಅಣಕು ಕಾರ್ಯಾಚರಣೆಯನ್ನು ಗಣ್ಯರು ವೀಕ್ಷಿಸಿದರು.
ಭಯೋತ್ಪಾದನೆಯು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ದೊಡ್ಡ ಕಂಟಕವಾಗಿದ್ದು, ಸ್ಥಳೀಯ ಪೊಲೀಸರೇ ಮೊದಲ ಪ್ರತಿಕ್ರಿಯೆ ನೀಡುವುದರಿಂದ ಇಂತಹ ತರಬೇತಿಗಳು ಅಂತಿಮ ಹಂತದ ಕಾರ್ಯಾಚರಣೆಯವರೆಗೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಮ್ ಅಭಿಪ್ರಾಯಪಟ್ಟಿದ್ದಾರೆ.
