ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಬಿಜೆಪಿ ಮುಖಂಡರ ನಡುವಿನ ಪ್ರೋಟೋಕಾಲ್ ಸಮರ ತೀವ್ರಗೊಂಡಿದೆ. ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಕ್ಕೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿರುವ ಶಾಸಕರು, ಪ್ರೋಟೋಕಾಲ್ ವಿಚಾರವಾಗಿ ಮಾತನಾಡುವವರಿಗೆ ‘ಸೂಕ್ತ ಸಮಯದಲ್ಲಿ ಪಿಚ್ಚರ್ ತೋರಿಸುತ್ತೇನೆ’ ಎಂದು ಗುಡುಗಿದ್ದಾರೆ.


ಬೈಲಹೊಂಗಲ ತಾಲೂಕು ಆರೋಗ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರು, ಶಾಸಕ ಬಾಬಾಸಾಹೇಬ ಪಾಟೀಲ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರೋಟೋಕಾಲ್ ಉಲ್ಲಂಘಿಸುತ್ತಿದ್ದಾರೆ ಎಂದು ಸರಣಿ ಆರೋಪ ಮಾಡಿದ್ದರು. ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಶಾಸಕರು, “ನನ್ನ ಕ್ಷೇತ್ರ ಅಭಿವೃದ್ಧಿ ಹೊಂದಬೇಕಿದೆ ಮತ್ತು ಜನರಿಗೆ ತಲುಪಬೇಕಾದ ಕೆಲಸಗಳು ಆಗಬೇಕಿದೆ. ಬೇರೆ ಯಾವುದೇ ಅನಗತ್ಯ ವಿಚಾರಗಳತ್ತ ನಾನು ಗಮನ ಹರಿಸುವುದಿಲ್ಲ. ಪ್ರೋಟೋಕಾಲ್ ನೆಪದಲ್ಲಿ ರಾಜಕೀಯ ಮಾಡುವವರಿಗೆ ಉತ್ತರ ನೀಡಲು ನನಗೂ ಸಮಯವಿದೆ. ಸೂಕ್ತ ಸಮಯ ಬಂದಾಗ ಪ್ರಶ್ನೆ ಮಾಡಿ ಅಸಲಿ ಪಿಚ್ಚರ್ ತೋರಿಸುತ್ತೇನೆ” ಎಂದು ತಮ್ಮ ವಿರೋಧಿಗಳಿಗೆ ಸವಾಲು ಎಸೆದಿದ್ದಾರೆ.

ಇದೇ ವೇಳೆ ಜಿಲ್ಲೆಯ ರಾಜಕೀಯ ವಿಚಾರಗಳ ಕುರಿತು ಮಾತನಾಡಿದ ಅವರು, ಬೆಳಗಾವಿ ಬೃಹತ್ ಜಿಲ್ಲೆಯಾಗಿದ್ದು ಮತ್ತೊಂದು ಸಚಿವ ಸ್ಥಾನದ ಅಗತ್ಯವಿದೆ ಹಾಗೂ ಸೂಕ್ತ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದರು. ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ ಶಾಸಕರು, ಕಿತ್ತೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದೇ ತಮ್ಮ ಮುಖ್ಯ ಗುರಿ ಎಂದು ಪುನರುಚ್ಚರಿಸಿದರು.
