ವಿಜಯನಗರ ಜಿಲ್ಲೆಯಲ್ಲಿ ಬರ ವೀಕ್ಷಣೆ ನಡೆಸಿದ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಸಂಪುಟ ವಿಸ್ತರಣೆ ಹಾಗೂ ಬಿಜೆಪಿ ನಾಯಕರ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ಯಾವ ಖಾತೆ ನೀಡಿದರೂ ನಿಭಾಯಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ನಲ್ಲಿ ‘ಪೇಮೆಂಟ್ ಸೀಟ್’ ಸಂಸ್ಕೃತಿಯಿಲ್ಲ, ಅದು ಬಿಜೆಪಿಯಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.


ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಜಾಪುರ ಹಾಗೂ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮಗಳಲ್ಲಿ ಬರ ವೀಕ್ಷಣೆ ನಡೆಸಿದ ಸಚಿವ ಜಮೀರ್ ಅಹ್ಮದ್ ಖಾನ್, ಮಾಧ್ಯಮಗಳೊಂದಿಗೆ ಮಾತನಾಡಿದರು. ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದಾಗಿದ್ದು, ಸಿಎಂ ಅಥವಾ ಯಾರೇ ಹೇಳಿದರೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು. ಕಳೆದ ಬಾರಿ ವಸತಿ ಇಲಾಖೆ ಜವಾಬ್ದಾರಿ ಸಿಕ್ಕಾಗ ರಾಜ್ಯದ ಬಡವರಿಗೆ 79,860 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು, ಈ ಬಾರಿಯೂ ಯಾವುದೇ ಖಾತೆ ನೀಡಿದರೂ ದಕ್ಷತೆಯಿಂದ ನಿಭಾಯಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಗಳಿಗೆ ‘ಪೇಮೆಂಟ್ ಸೀಟ್’ ನೀಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಕಟುವಾಗಿ ತಿರುಗೇಟು ನೀಡಿದ ಸಚಿವರು, ಪೇಮೆಂಟ್ ಸೀಟ್ ಸಂಸ್ಕೃತಿ ಕಾಂಗ್ರೆಸ್ನಲ್ಲಿಲ್ಲ, ಅದು ಬಿಜೆಪಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿದ್ದಾಗಲೇ ಯತ್ನಾಳ್ ಅವರು ‘2000 ಕೋಟಿ ಕೊಟ್ಟರೆ ಸಿಎಂ ಆಗಬಹುದು’ ಎಂದು ಹೇಳಿದ್ದನ್ನು ನೆನಪಿಸಿದ ಅವರು, ಪೌರಕಾರ್ಮಿಕನ ಮಗ ಬಸವಂತಪ್ಪನವರನ್ನು ಸಚಿವರನ್ನಾಗಿ ಮಾಡಿರುವುದು ಕಾಂಗ್ರೆಸ್ನ ಸಾಮಾಜಿಕ ನ್ಯಾಯಕ್ಕೆ ಸಾಕ್ಷಿ. ಇದನ್ನೂ ಪೇಮೆಂಟ್ ಸೀಟ್ ಅನ್ನುತ್ತೀರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಮುನಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಇನ್ನು ಬರ ವೀಕ್ಷಣೆ ಸಂದರ್ಭದಲ್ಲಿ ಕೂಡ್ಲಿಗಿಯ ಮೊರಬ ಗ್ರಾಮದ ರೈತ ಮಹಿಳೆ ಶಾಂತಲಿಂಗಮ್ಮ ಅವರ ಜಮೀನಿಗೆ ಭೇಟಿ ನೀಡಿದ ಸಚಿವರು, ಮಳೆಯ ಅಭಾವದಿಂದ ಒಣಗುತ್ತಿರುವ ಮೆಕ್ಕೆಜೋಳ ಹಾಗೂ ಸಜ್ಜೆ ಬೆಳೆಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಜಾಹ್ನವಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ ಸೇರಿದಂತೆ ಹಲವಾರು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
