ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ-ಪತ್ನಿ ನಡುವಿನ ಜಗಳದ ಹಿನ್ನೆಲೆಯಲ್ಲಿ ಠಾಣೆಗೆ ಬಂದಿದ್ದ ಖಲೀಲ್ ಎಂಬಾತನನ್ನು ಹೊಡೆದು ಸಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮೃತನ ಪತ್ನಿ ನೀಡಿದ ದೂರಿನನ್ವಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.


ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಖಲೀಲ್ ಕಸ್ಟೋಡಿಯಲ್ ಡೆತ್ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಪತಿ-ಪತ್ನಿ ಜಗಳದ ಹಿನ್ನೆಲೆಯಲ್ಲಿ ಠಾಣೆಗೆ ಬಂದಿದ್ದ ಖಲೀಲ್ನನ್ನು ಪೊಲೀಸರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಪತ್ನಿ ಶೈನಾಜ್ ಗಂಭೀರ ಆರೋಪ ಮಾಡಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ವಿಜಯನಗರ ಎಸ್ಪಿ ಜಾಹ್ನವಿ ಅವರು ತಕ್ಷಣವೇ ಸ್ಥಳದಲ್ಲೇ ಮೊಕ್ಕಾಂ ಹೂಡಿ ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಹೆಡ್ ಕಾನ್ಸ್ಟೇಬಲ್ ಇಟ್ಟಗಿ ರಾಘವೇಂದ್ರ ಹಾಗೂ ಪಿಸಿ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಸ್ಪಿ ಜಾಹ್ನವಿ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

