ಮೀನು ಹಿಡಿಯಲು ಹೋದ ಮೂವರು ಯುವಕರು ನಾಪತ್ತೆಯಾಗಿ, ಅವರಲ್ಲಿ ಓರ್ವನ ಮೃತದೇಹ ಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ನಡೆದಿದೆ.


ನಾಪತ್ತೆಯಾದವರನ್ನು ರಾಜು (22), ಯಮನಪ್ಪ (20) ಮತ್ತು ಅಜ್ಜಪ್ಪ (26) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಮೀನು ಹಿಡಿಯಲು ಹೋದ ಇವರು ಮನೆಗೆ ಹಿಂತಿರುಗದಿರುವ ಕಾರಣ ಕುಟುಂಬಸ್ಥರಲ್ಲಿ ಆತಂಕ ವ್ಯಕ್ತವಾಗಿತ್ತು. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ತಂಬ್ರಹಳ್ಳಿ ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಯಮನಪ್ಪನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಉಳಿದ ಇಬ್ಬರ ಪತ್ತೆಗಾಗಿ ಹಗರಿಬೊಮ್ಮನಹಳ್ಳಿ ಪೊಲೀಸರು SDRF (ರಾಜ್ಯ ವಿಪತ್ತು ಸ್ಪಂದನಾ ಪಡೆ) ತಂಡವನ್ನು ಸ್ಥಳಕ್ಕೆ ಕರೆಸಿದ್ದಾರೆ. ಹಗರಿಬೊಮ್ಮನಹಳ್ಳಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
