ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ದಿವ್ಯಾ ಪ್ರದೀಪ್ ದೇಸಾಯಿ ಅವರನ್ನು ರಾಜ್ಯಪಾಲರು ಗೌರವಿಸಿದ್ದಾರೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಸನ್ಮಾನ ನೆರವೇರಿದೆ.

ಖಾನಾಪುರ ತಾಲೂಕಿನ ಝೂಂಜವಾಡ (ಕೆ.ಎನ್) ಗ್ರಾಮದ ಪುತ್ರಿ ಹಾಗೂ ಬೀಡಿಯ ಹೋಲಿ ಕ್ರಾಸ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಾ ಪ್ರದೀಪ್ ದೇಸಾಯಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಶ್ರೇಯಾಂಕ ಗಳಿಸಿ ಸಾಧನೆ ಮಾಡಿದ್ದರು. ಅವರ ಈ ಅಪೂರ್ವ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ದಿವ್ಯಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಸ್ತುತ ಬೆಳಗಾವಿಯ ಗುರುದೇವ ಜಾಂಬಗಿ ಸೈನ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ದಿವ್ಯಾ ದೇಸಾಯಿ ಅವರ ಈ ಸಾಧನೆಗೆ ನಾಡಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
