ಖಾನಾಪುರದ ಶ್ರೀ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಸತ್ತಿನ ಸಚಿವ ಸಂಪುಟದ ಪದಗ್ರಹಣ ಸಮಾರಂಭ ಅತ್ಯಂತ ಸಂಭ್ರಮದಿಂದ ನೆರವೇರಿದೆ. ಕಾಲೇಜಿಗೆ ಶಾಸಕರ ಅನುದಾನದಿಂದ 5 ಲಕ್ಷ ರೂ. ನೆರವು ಘೋಷಿಸಿದ ಶಾಸಕರು, ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನ ನಡೆಸಿ ಸಾಧನೆ ಮಾಡಲು ಕರೆ ನೀಡಿದ್ದಾರೆ. ಈ ಕುರಿತು ವರದಿ.


ಖಾನಾಪುರ ನಗರದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ನೂತನ ಸಚಿವ ಸಂಪುಟದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವು ಮಾಣಿಕರಾವ್ ದೇಶಪಾಂಡೆ ಸಭಾಂಗಣದಲ್ಲಿ ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಜರುಗಿತು. ಸಂಸ್ಥೆಯ ಅಧ್ಯಕ್ಷ ಅಡ್ವೊಕೇಟ್ ಚೇತನ್ ಮಣೇರಿಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖಾನಾಪುರ ತಾಲೂಕಿನ ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜು ಹಂತವು ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ದುರಭ್ಯಾಸ ಮತ್ತು ವ್ಯಸನಗಳಿಂದ ದೂರವಿದ್ದು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದು ಶಾಸಕರು ಕರೆ ನೀಡಿದ್ದಲ್ಲದೆ, ಶಾಸಕರ ನಿಧಿಯಿಂದ ಕಾಲೇಜಿಗೆ 5 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಅಧ್ಯಕ್ಷೀಯ ಭಾಷಣ ಮಾಡಿದ ಅಡ್ವೊಕೇಟ್ ಚೇತನ್ ಮಣೇರಿಕರ್, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಕಾಲೇಜು ಹಾಗೂ ಹೆತ್ತವರಿಗೆ ಕೀರ್ತಿ ತರಬೇಕು ಎಂದರು. ಪ್ರಾಚಾರ್ಯ ಕೆ.ಪಿ. ಚಾಪಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದ ಈ ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಹಾಸ್ ಕುಲಕರ್ಣಿ, ಉಪನ್ಯಾಸಕ ಎಸ್.ಎಸ್. ಪಾಟೀಲ್, ಉಜ್ವಲಾ ಬಾಚೋಳಕರ್, ಸುನಿತಾ ಲಾಡ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜು ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
