ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಟಪಾಲ್ ಗಣೇಶ್, ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ರೆಡ್ಡಿ ವಿರುದ್ಧ ಕಿಡಿಕಾರಿರುವ ಅವರು, ಜನಾರ್ದನ ರೆಡ್ಡಿ ಸತ್ಯಹರಿಶ್ಚಂದ್ರನಾ? ತಾವೇ ತಪ್ಪೊಪ್ಪಿಕೊಂಡು ಶಿಕ್ಷೆ ಕಡಿಮೆ ಮಾಡಿಸಿಕೊಂಡವರು ಈಗ ನೈತಿಕತೆ ಬಗ್ಗೆ ಮಾತನಾಡುತ್ತಿರುವುದು ಎಂದು ವಾಗ್ದಾಳಿ ನಡೆಸಿದ್ದಾರೆ.

ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯ ಬೆನ್ನಲ್ಲೇ, ಪ್ರಕರಣದ ಪ್ರಮುಖ ಸಾಕ್ಷಿಯಾದ ಟಪಾಲ್ ಗಣೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ನಾಯಕರಿಗೆ ಮಾನ-ಮರ್ಯಾದೆ ಇದ್ದರೆ ಮೊದಲು ಸಿಬಿಐ ಕೋರ್ಟ್ ಜಡ್ಜ್ಮೆಂಟ್ ಓದಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಕೋರ್ಟ್ ಮುಂದೆ ತಾವೇ ತಪ್ಪನ್ನು ಒಪ್ಪಿಕೊಂಡು ಶಿಕ್ಷೆ ಕಡಿಮೆ ಮಾಡುವಂತೆ ಕೇಳಿಕೊಂಡವರು, ಈಗ ನೈತಿಕತೆಯನ್ನು ಪ್ರಶ್ನಿಸುತ್ತಿರುವುದೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇವಲ ಸ್ಟೇ ಸಿಕ್ಕಿದ ಮಾತ್ರಕ್ಕೆ ಜನಾರ್ದನ ರೆಡ್ಡಿ ಅವರು ಕಾನೂನು ಹೋರಾಟದಿಂದ ಸಂಪೂರ್ಣ ಮುಕ್ತರಾಗುವುದಿಲ್ಲ ಎಂದು ಟಪಾಲ್ ಗಣೇಶ್ ಸ್ಪಷ್ಟಪಡಿಸಿದ್ದಾರೆ. 7 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದವರು ರಾಜಕೀಯ ನೈತಿಕತೆಯ ಬಗ್ಗೆ ಮಾತನಾಡುವುದು ವಿಪರ್ಯಾಸ ಎಂದಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರಿಗೆ ಬಿಜೆಪಿ ನಾಯಕರು ಯಾಕೆ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಬಿಜೆಪಿ ನಾಯಕರು ಕೂಡಲೇ ಈ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
