ಪಣಜಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಲೋಂಡಾದಿಂದ ಸಂಗರಗಾಳಿ ವರೆಗಿನ ಸರ್ವಿಸ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳಪೆ ಕಾಮಗಾರಿಯಿಂದಾಗಿ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆಯಿಂದ ಬಿದ್ದಿದ್ದ ಗುಂಡಿಗಳಿಗೆ ಗುತ್ತಿಗೆದಾರರು ಕೇವಲ ಮಣ್ಣು ತುಂಬಿ ಕೈತೊಳೆದ ಪರಿಣಾಮ, ರಸ್ತೆಯುದ್ದಕ್ಕೂ ಕೆಸರು ನಿರ್ಮಾಣವಾಗಿದ್ದು ಬಸ್ ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ಕಂಟಕ ಎದುರಾಗಿದೆ.


ಮಳೆಯಿಂದಾಗಿ ಪಣಜಿ-ಬೆಳಗಾವಿ ಮಹಾಮಾರ್ಗದ ಗುಂಜಿ ಗ್ರಾಮದಿಂದ ಸಂಗರಗಾಳಿ ವರೆಗಿನ ಸರ್ವಿಸ್ ರಸ್ತೆಯಲ್ಲಿ ಬಿದ್ದಿದ್ದ ಬೃಹತ್ ಗುಂಡಿಗಳಿಗೆ ಸಂಬಂಧಪಟ್ಟ ಇಲಾಖೆಯ ಗುತ್ತಿಗೆದಾರರು ಕೇವಲ ಮಣ್ಣು ಹಾಕಿ ಮುಚ್ಚಿರುವುದರಿಂದ ರಸ್ತೆಯುದ್ದಕ್ಕೂ ಈಗ ಕೆಸರಿನ ಸಾಮ್ರಾಜ್ಯ ನಿರ್ಮಾಣವಾಗಿದೆ. ಈ ಕೆಸರಿನಿಂದಾಗಿ ಲೋಂಡಾ-ಖಾನಾಪುರ ಮಾರ್ಗದ ಸಾರಿಗೆ ಬಸ್ಗಳು ಹಾಗೂ ಭಾರಿ ಸರಕು ಸಾಗಣೆ ವಾಹನಗಳು ಕೆಸರಿನಲ್ಲಿ ಸಿಲುಕಿಕೊಳ್ಳುವ ಭೀತಿ ಎದುರಾಗಿದ್ದು, ಚಾಲಕರು ಜೀವ ಕೈಯಲ್ಲಿ ಹಿಡಿದು ಸರ್ಕಸ್ ಮಾಡುವಂತಾಗಿದೆ. ಸದ್ಯದಲ್ಲೇ ಮತ್ತಷ್ಟು ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದ್ದು, ವಾಹನ ಸವಾರರು “ಕೆಸರಿಗಿಂತ ರಸ್ತೆ ಗುಂಡಿಗಳೇ ವಾಸಿ” ಎಂದು ಆಕ್ರೋಶದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದ್ದರಿಂದ ಗುತ್ತಿಗೆದಾರರು ಕೇವಲ ಮಣ್ಣು ಹಾಕುವುದನ್ನು ಬಿಟ್ಟು, ತಕ್ಷಣವೇ ಕಲ್ಲು ಮತ್ತು ಜಲ್ಲಿಯನ್ನು ಬಳಸಿ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿ ಸಂಚಾರ ಸುಗಮಗೊಳಿಸಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ತೀವ್ರ ಒತ್ತಾಯ ಹೂಡಿದ್ದಾರೆ.
