londa

ಲೋಂಡಾದಲ್ಲಿ ಈಸ್ಟರ್ ಹಬ್ಬದ ಪಟಾಕಿ ಕಿಡಿ: ವಾಗ್ವಾದ ವಿಕೋಪಕ್ಕೆ ಹೋಗಿ ಮಾರಾಮಾರಿ, ಐವರ ವಿರುದ್ಧ ಎಫ್‌ಐಆರ್ ದಾಖಲು

Share

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೋಂಡಾ ಗ್ರಾಮದಲ್ಲಿ ಈಸ್ಟರ್ ಹಬ್ಬದ ಸಂಭ್ರಮದ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭೀಕರ ಸಂಘರ್ಷ ಏರ್ಪಟ್ಟಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಲೋಂಡಾದ ಚರ್ಚ್ ಗಲ್ಲಿಯಲ್ಲಿ ಏಪ್ರಿಲ್ 5ರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ಸಂಭವಿಸಿದೆ. ಸಂತೋಷ್ ಅಲಿಯಾಸ್ ಪೀಟರ್ ಜಾನ್ಸನ್ ಅರೇಕರ್ ಮತ್ತು ಅವರ ಸಹೋದರ ರೋಬಿನ್ ಜಾನ್ಸನ್ ತಮ್ಮ ಮನೆಯ ಮುಂದೆ ಈಸ್ಟರ್ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಾನ್ಸನ್ ಪುಲಾಮಿನ್ ಡಿಕೋಸ್ಟಾ ಸೇರಿದಂತೆ ಐವರು ಆರೋಪಿಗಳು, “ಈಸ್ಟರ್ ನಿನ್ನೆಯೇ ಮುಗಿದಿದೆ, ಇಂದು ಏಕೆ ಪಟಾಕಿ ಸಿಡಿಸುತ್ತಿದ್ದೀರಿ?” ಎಂದು ಆಕ್ಷೇಪ ವ್ಯಕ್ತಪಡಿಸಿ ಜಗಳ ತೆಗೆದಿದ್ದಾರೆ. ಕೇವಲ ಮಾತಿನ ಚಕಮಕಿಯಿಂದ ಆರಂಭವಾದ ಈ ವಾಗ್ವಾದವು ನಂತರ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಆರೋಪಿಗಳ ಗುಂಪು ದೂರುದಾರರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಈ ವೇಳೆ ರೋಬಿನ್ ಜಾನ್ಸನ್ ಅವರ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದರಿಂದ ತೀವ್ರ ಗಾಯಗಳಾಗಿವೆ. ಅಷ್ಟೇ ಅಲ್ಲದೆ, ಮತ್ತೆ ಪಟಾಕಿ ಸಿಡಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಮಹಿಳಾ ಪೊಲೀಸ್ ಉಪನೀರಿಕ್ಷಕಿ ಆರ್. ಎಸ್. ಸಪಾಟೆ ಅವರು ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!