Khanapur

ರಾಷ್ಟ್ರೀಯ ವೈದ್ಯರ ದಿನಾಚರಣೆ: ಗ್ರಾಮೀಣ ಭಾಗದಲ್ಲಿ 45 ವರ್ಷ ಸೇವೆ ಸಲ್ಲಿಸಿದ ಹಿರಿಯ ವೈದ್ಯರಿಗೆ ‘ಆರೋಗ್ಯ ಭಾರತಿ’ ಗೌರವ

Share

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಆರೋಗ್ಯ ಭಾರತಿ ಬೆಳಗಾವಿ ಮತ್ತು ಖಾನಾಪುರ ಶಾಖೆಯ ವತಿಯಿಂದ, ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳಲ್ಲಿ ಕಳೆದ 45 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು. ಹಲಸಿಯ ಐತಿಹಾಸಿಕ ಭೂಮಿಯಲ್ಲಿ ನಡೆದ ಈ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ತ್ರಿರತ್ನಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಯಿತು.


ಆರೋಗ್ಯ ಭಾರತಿ ಬೆಳಗಾವಿ ಹಾಗೂ ಖಾನಾಪುರ ಶಾಖೆಯ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ನಿಮಿತ್ತ ಖಾನಾಪುರ, ಹಲಸಿ ಮತ್ತು ಬಿಡಿ ಪರಿಸರದ ದುರ್ಗಮ ಭಾಗಗಳಲ್ಲಿ 1980-90 ರ ದಶಕದಿಂದ ಅವಿರತವಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ಹಿರಿಯ ವೈದ್ಯರಾದ ಡಾ. ಸುಧೀರ್ ನಾಯ್ಕ್, ಡಾ. ಶಿವಾಜಿ ಕೆ. ಪಾಟೀಲ್ ಮತ್ತು ಡಾ. ವಿ. ಎಸ್. ಜಾವಳಿ ಎಂಬ ವೈದ್ಯಕೀಯ ತ್ರಿರತ್ನಗಳನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ಹಲಸಿಯ ಪವಿತ್ರ ಶ್ರೀ ಭುವರಾಹ ಲಕ್ಷ್ಮಿ ನರಸಿಂಹ ಪುಣ್ಯಕ್ಷೇತ್ರದಲ್ಲಿರುವ ಡಾ. ಸುಧೀರ್ ನಾಯ್ಕ್ ಅವರ ನಿವಾಸದಲ್ಲಿ ಈ ಭಾವಪೂರ್ಣ ಸಮಾರಂಭ ಜರುಗಿತು. ಆರೋಗ್ಯ ಭಾರತಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷೆ ಸೌ. ಹೇಮಾ ಅಂಬೇವಾಡಿಕರ್ ಮತ್ತು ಸೌ. ಮಾಯಾ ಕೋಷ್ಟಿ ಅವರ ಓಂಕಾರ ಪಠಣ ಹಾಗೂ ಧನ್ವಂತರಿ ಸ್ತವನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ವಾಸುದೇವ ಇನಾಮದಾರ್ ಪ್ರಾಸ್ತಾವಿಕವಾಗಿ ಮಾತನಾಡಿ ‘ಸ್ವಸ್ಥ ಸಮಾಜ’ದ ಧೇಯೋದ್ದೇಶಗಳನ್ನು ವಿವರಿಸಿದರು, ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷ ಡಾ. ದತ್ತಪ್ರಸಾದ್ ಗಿಜರೆ ಅತಿಥಿಗಳನ್ನು ಸ್ವಾಗತಿಸಿ ಹಿರಿಯ ವೈದ್ಯರನ್ನು ಪರಿಚಯಿಸಿದರು. ಸನ್ಮಾನ ಸ್ವೀಕರಿಸಿದ ಹಿರಿಯ ವೈದ್ಯರು ಅಂದಿನ ಕಾಲದ ಸೀಮಿತ ಸಂಪನ್ಮೂಲಗಳ ನಡುವೆ ತಾವು ನೀಡಿದ ರೋಗಿ ಸೇವೆ ಮತ್ತು ಕಠಿಣ ಪರಿಸ್ಥಿತಿಗಳ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯನ್ನು ಸಾಕಾರಗೊಳಿಸಿದರು.

ಕಾರ್ಯಕ್ರಮದಲ್ಲಿ ಖಾನಾಪುರ ಶಾಖೆಯ ಅಧ್ಯಕ್ಷ ಡಾ. ಡಿ. ಇ. ನಾಡಗೌಡ, ಉಪಾಧ್ಯಕ್ಷ ಡಾ. ಸುದರ್ಶನ್ ಸುಳಕರ್ ಮತ್ತು ಡಾ. ರಾಧಾಕೃಷ್ಣ ಹಾರವಾಡೇಕರ್ ಅವರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಡಾ. ಸುಧೀರ್ ನಾಯ್ಕ್ ಹಾಗೂ ಸೌ. ಸುಮಾ ನಾಯ್ಕ್ ಕುಟುಂಬದವರು ಎಲ್ಲರನ್ನೂ ಆದರದಿಂದ ಸತ್ಕರಿಸಿದರು. ಲಕ್ಷ್ಮಣ್ ಶೆಟ್ಟಿ ವಂದಿಸಿದರು ಮತ್ತು ಸಂಜಯ್ ಕುಲಕರ್ಣಿ ಅವರ ಸಹಕಾರದೊಂದಿಗೆ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Tags:

error: Content is protected !!