ಖಾನಾಪೂರ ತಾಲೂಕಿನಲ್ಲಿ ನೊಂದು ಬಂದ ರೋಗಿಗಳಿಗೆ ಸ್ಪಂದಿಸಿ, ವೈದ್ಯರು ನಾರಾಯಣ ಹರಿ ಎಂಬ ಮಾತನ್ನು ನಿಜವಾಗಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಡಾಕ್ಟರ್ ನಾರಾಯಣ ಒಡ್ಡಿನವರ ಅವರನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಸಾಯಿ ಸೇವಾ ಸಮಿತಿಯ ವತಿಯಿಂದ ಸತ್ಕರಿಸಿ ಗೌರವಿಸಲಾಗಿದೆ.


ಡಾಕ್ಟರ್ ನಾರಾಯಣ ಒಡ್ಡಿನವರ ಹಿರೇಬಾಗೇವಾಡಿಗೆ ವರ್ಗಾವಣೆಗೊಂಡ ಬಳಿಕವೂ ಅವರು ತಮ್ಮ ಸೇವಾ ಮನೋಭಾವದಿಂದ ಜನಮನ ಗೆದ್ದಿದ್ದಾರೆ.ಸಾಯಿ ಸೇವಾ ಸಮಿತಿಯಿಂದ ನಡೆದ ಭವ್ಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾಕ್ಟರ್ ನಾರಾಯಣ ಒಡ್ಡಿನವರ ಅವರು, ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಮಾರ್ಮಿಕವಾಗಿ ನುಡಿದರು. ಸಮಾಜದಲ್ಲಿ ಜನರು ವೈದ್ಯರನ್ನು ದೇವರೆಂದು ನಂಬುತ್ತಾರೆ; ಸಾರ್ವಜನಿಕರ ಆ ನಂಬಿಕೆಯಂತೆ ನಾವು ಪ್ರಾಮಾಣಿಕವಾಗಿ ನಡೆದುಕೊಂಡು ಅವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ ಎಂದರು. ಮುಂದಿನ ದಿನಗಳಲ್ಲೂ ಎಲ್ಲರನ್ನು ಒಗ್ಗೂಡಿಸಿ, ಒಗ್ಗಟ್ಟಿನಿಂದ ನೊಂದ ರೋಗಿಗಳಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖ ನಾಗರಿಕರು ಉಪಸ್ಥಿತರಿದ್ದು ವೈದ್ಯರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಅಲ್ತಾಫ್ ಎಂ ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪೂರ)
