ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಅನನ್ಯ. ಇದೇ ಹಿನ್ನೆಲೆಯಲ್ಲಿ ಬೆಳಗಾವಿಯ ಭಾಗ್ಯನಗರ ಸೇವಾ ಕೇಂದ್ರದಲ್ಲಿ ಬ್ರಹ್ಮಕುಮಾರೀಸ್ ಮೆಡಿಕಲ್ ವಿಂಗ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು


ಬೆಳಗಾವಿಯ ಭಾಗ್ಯನಗರ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಡಾ. ಸಂಗೀತ ಬೆಳಗಾವಿಮಠ, ಡಾ. ಬಿ.ಸಿ. ರಾಯ್ ಅವರ ಸ್ಮರಣಾರ್ಥ ಆಚರಿಸಲಾಗುವ ಈ ದಿನವು ವೈದ್ಯರ ತ್ಯಾಗ ಮತ್ತು ಬದ್ಧತೆಯನ್ನು ಗೌರವಿಸುವ ಸುದಿನ ಎಂದರು. ಬ್ರಹ್ಮಕುಮಾರೀಸ್ ಸಂಸ್ಥೆಯ ಉಪವಲಯ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿಕೆ ಅಂಬಿಕಾ ಅಕ್ಕನವರು ಮಾತನಾಡಿ, ವೈದ್ಯರು ರೋಗಿಗಳಿಗೆ ಕೇವಲ ಔಷಧ ನೀಡದೆ ಅವರ ವ್ಯಸನಗಳನ್ನು ಮುಕ್ತಗೊಳಿಸಬೇಕು ಹಾಗೂ ಪರಮಾತ್ಮನ ನೆನಪಿನಿಂದ ಶಕ್ತಿ ಪಡೆದು ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸಂಜೀವ್ ಉಮುದಿ ಮತ್ತು ಡಾ. ವಿಜಯಲಕ್ಷ್ಮಿ ಉಮದಿ ಅವರು ಪ್ರತಿಯೊಂದು ಆಸ್ಪತ್ರೆಯಲ್ಲೂ ಮೆಡಿಟೇಶನ್ ರೂಮ್ ಇರಬೇಕಾದ ಅಗತ್ಯತೆಯನ್ನು ಒತ್ತಿಹೇಳಿದರೆ, ಸ್ತ್ರೀರೋಗ ತಜ್ಞೆ ಡಾ. ಮುಕ್ತ ಹಳಕುಂಟೆ ಮಹಿಳೆಯರ ಆರೋಗ್ಯ ಜಾಗೃತಿ ಬಗ್ಗೆ ಹಾಗೂ ಮಕ್ಕಳ ತಜ್ಞೆ ಡಾ. ಸೌಮ್ಯ ನಿರ್ಣೇಕರ್ ಯುವ ಪೀಳಿಗೆಗೆ ಬಾಲ್ಯದಲ್ಲೇ ಧ್ಯಾನ ಕಲಿಸುವ ಮಹತ್ವದ ಬಗ್ಗೆ ತಿಳಿಸಿದರು. ಪ್ರಕೃತಿಯೊಂದಿಗೆ ಹೊಂದಾಣಿಕೆ ಮತ್ತು ಯೋಗಾಸನದ ಅಗತ್ಯವನ್ನು ಡಾ. ಹೆಗಡೆ ವಿವರಿಸಿದ ಈ ಕಾರ್ಯಕ್ರಮದಲ್ಲಿ ಬಿಕೆ ಯೋಗೇಶ್, ಬಿಕೆ ಶ್ರೀಕಾಂತ್, ಬಿಕೆ ಚಂದ್ರಿಕಾ ಉಪಸ್ಥಿತರಿದ್ದರು. ಬಿಕೆ ಶೀತಲಕ್ಕ ನಿರೂಪಿಸಿದರೆ, ಮಹಾದೇವಿ ಸಂಬಗಿ ವಂದಿಸಿದರು.

