State

ಜನರ ಮನೆಬಾಗಿಲಿಗೆ ಸರ್ಕಾರ: ಹೊಸ ‘ಪ್ರಜಾಸೇವೆ ಇಲಾಖೆ’ ಸ್ಥಾಪನೆ; ಖಾಸಗಿ ವಿದ್ಯುತ್ ವಿತರಣೆಗೆ ಸಿಎಂ ಬ್ರೇಕ್!

Share

ರಾಜ್ಯದ ಜನತೆಯ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಚಿವ ಸಂಪುಟ ಸಭೆಯ ನಿರ್ಧಾರಗಳ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜನರ ಸಮಸ್ಯೆ ಆಲಿಸಲು ಹೊಸ ಇಲಾಖೆ ಸ್ಥಾಪನೆ ಸೇರಿದಂತೆ ವಿದ್ಯುತ್ ಮತ್ತು ಕಟ್ಟಡ ಸಕ್ರಮದ ಕುರಿತು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗಳಿಗೆ ಗುರುವಾರ ಮಾಹಿತಿ ನೀಡಿದರು. ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ಕರ್ನಾಟಕ ಸರ್ಕಾರವು “ಪ್ರಜಾಸೇವೆ ಇಲಾಖೆ” ಎಂಬ ಹೊಸ ಇಲಾಖೆಯನ್ನು ಪ್ರಾರಂಭಿಸುತ್ತಿದೆ. ಒಬ್ಬ ಸಚಿವರಿಗೆ ಇದರ ಸಂಪೂರ್ಣ ಜವಾಬ್ದಾರಿ ನೀಡಲಾಗುತ್ತಿದ್ದು, ಐಎಎಸ್ ಅಧಿಕಾರಿಯೊಬ್ಬರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗುವುದು. ಜನರು ತಮ್ಮ ಸಮಸ್ಯೆಗಳಿಗಾಗಿ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು, ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಕಡ್ಡಾಯವಾಗಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ‘ಪ್ರಜಾಸೇವೆ ಅಭಿಯಾನ’ ಹಮ್ಮಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಅಭಿಯಾನದಲ್ಲಿ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳ ಕೌಂಟರ್‌ಗಳು ಲಭ್ಯವಿರಲಿದ್ದು, ಸಾರ್ವಜನಿಕರ ಅರ್ಜಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇದೇ ವೇಳೆ, ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ವಿಚಾರವಾಗಿ ಕೆಇಆರ್‌ಸಿ (KERC) ಮುಂದೆ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ಡಿಸಿಎಂ, ಖಾಸಗೀಕರಣಕ್ಕೆ ಸರ್ಕಾರದ ಸಹಮತಿ ಇಲ್ಲ ಎಂದು ಎಲ್ಲಾ ಎಸ್ಕಾಂಗಳಿಗೆ ತಿಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ ಎಂದರು. ಇನ್ನು ಕಟ್ಟಡಗಳ ಒಸಿಸಿಸಿ (OCCC) ನಿಯಮಾವಳಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ 60:40 ಮತ್ತು ಶೇ. 20 ರಷ್ಟು ಏರುಪೇರು ಇರುವ ಕಟ್ಟಡಗಳ ಸಕ್ರಮದ ಬಗ್ಗೆಯೂ ಮಹತ್ವದ ಮಾಹಿತಿ ನೀಡಿದ ಅವರು, ಸಾರ್ವಜನಿಕರ ಮನವಿಯ ಮೇರೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ಅರ್ಜಿದಾರರು ಅಗತ್ಯ ದಾಖಲೆಗಳು, ಛಾಯಾಚಿತ್ರಗಳು ಮತ್ತು ಜಿಪಿಎಸ್ ಕೋಆರ್ಡಿನೇಟ್ಸ್ ಸಮೇತ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಿಸಿದರು.

Tags:

error: Content is protected !!