ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರವು ಪ್ರತಿ ಹಂತದಲ್ಲೂ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.


ಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗಗರದ ತಮ್ಮ ನಿವಾಸದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ರಾಜ್ಯ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು. ಭವಿಷ್ಯದಲ್ಲಿ ಯಾವುದೇ ಮಗುವಿಗೂ ಅಂಗವಿಕಲತೆ ಕಾಡಬಾರದು ಎಂಬ ದೃಷ್ಟಿಯಿಂದ 5 ವರ್ಷದ ಒಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವ ಈ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯವಂತ ಕರ್ನಾಟಕ ಹಾಗೂ ಆರೋಗ್ಯವಂತ ಭಾರತ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮೊದಲ ಆದ್ಯತೆ ನೀಡಿದ್ದು, ಪೋಷಕರು ಯಾವುದೇ ನಿರ್ಲಕ್ಷ್ಯ ವಹಿಸದೇ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಸಿಎಂ ಮನವಿ ಮಾಡಿದರು.

ಇಂದಿರಾ ಗಾಂಧಿಯವರು 1972 ರಲ್ಲಿ ಪ್ರಾರಂಭಿಸಿದ ಈ ಐತಿಹಾಸಿಕ ಯೋಜನೆಗೆ ನಮ್ಮ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಎನ್‌ಜಿಒಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಸಿಎಂ ಶ್ಲಾಘಿಸಿದರು. ಈಗಾಗಲೇ ಭಾರತವು ಪೋಲಿಯೋ ಮುಕ್ತವಾಗಿದ್ದರೂ, ನೆರೆಹೊರೆಯ ದೇಶಗಳಿಂದ ಇದು ಮತ್ತೆ ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಈ ಅಭಿಯಾನವನ್ನು ಮುಂದುವರಿಸಲಾಗುತ್ತಿದೆ. ಗ್ರಾಮೀಣ, ಸ್ಲಂ ಮತ್ತು ಗುಡ್ಡಗಾಡು ಪ್ರದೇಶದ ಮಕ್ಕಳು ಸೇರಿದಂತೆ ಯಾರೊಬ್ಬರೂ ಈ ಲಸಿಕೆಯಿಂದ ವಂಚಿತರಾಗದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಇನ್ನುಳಿದವರು ಉಪಸ್ಥಿತರಿದ್ಧರು.
