ಬೆಂಗಳೂರು ಸಮೀಪದ ಮಾಗಡಿ ರಸ್ತೆಯ ಕ್ವಾರಿಯೊಂದರಲ್ಲಿ ಸಂಭವಿಸಿದ ಭೀಕರ ಮಣ್ಣು ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಇಂದು ಮಧ್ಯಾಹ್ನದೊಳಗೆ ಅಧಿಕೃತ ವರದಿ ತರಿಸಿಕೊಂಡು, ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಮಾಗಡಿ ರಸ್ತೆಯ ಕ್ವಾರಿಯಲ್ಲಿ ಮಣ್ಣು ಕುಸಿದು ಸುಮಾರು 6 ರಿಂದ 7 ಜನ ಮೃತಪಟ್ಟಿರುವ ಆತಂಕಕಾರಿ ಮಾಹಿತಿ ಲಭ್ಯವಾಗಿದ್ದು, ಸದ್ಯ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಜ್ವಾಲಾಮುಖಿ ಅಥವಾ ಬ್ಲಾಸ್ಟಿಂಗ್ನಿಂದ ನಡೆದ ಘಟನೆಯಲ್ಲ, ಬದಲಿಗೆ ಮಣ್ಣು ಕುಸಿತದಿಂದ ಸಂಭವಿಸಿದೆ ಎಂದು ತಿಳಿಸಿದ ಅವರು, ಮಧ್ಯಾಹ್ನದೊಳಗೆ ಈ ಕುರಿತು ಸಂಪೂರ್ಣ ಅಧಿಕೃತ ವರದಿ ತರಿಸಿಕೊಳ್ಳುತ್ತಿರುವುದಾಗಿ ಹೇಳಿದರು. ಕ್ವಾರಿ ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ನಿಯಮ ಉಲ್ಲಂಘಿಸಿದ್ದರೆ ಕಠಿಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಸಂತ್ರಸ್ತರ ಕುಟುಂಬಗಳಿಗೆ ನಿಯಮಾನುಸಾರ ಸೂಕ್ತ ಪರಿಹಾರ ವಿತರಿಸಲು ತಕ್ಷಣವೇ ಕ್ರಮ ವಹಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
