Uncategorized

ಕೊಟ್ಟ ಮಾತು ಉಳಿಸಿಕೊಂಡ ಶಾಸಕ ಆಸೀಫ್ ಸೇಠ್: ರಕ್ಷಣಾ ತಂಡಕ್ಕೆ ₹2.5 ಲಕ್ಷ ಮೌಲ್ಯದ ಸ್ಕೂಬಾ ಡೈವಿಂಗ್ ಉಪಕರಣ ಹಸ್ತಾಂತರ!

Share

ಕಪಿಲೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ನಡೆದಿದ್ದ ದುರಂತದ ಬೆನ್ನಲ್ಲೇ ಎಚ್ಚೆತ್ತ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ರಕ್ಷಣಾ ತಂಡಕ್ಕೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಶಾಸಕರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.


ಬೆಳಗಾವಿ ನಗರದ ತುರ್ತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಹಾಗೂ ಯುವ ಮುಖಂಡ ಅಮಾನ್ ಸೇಠ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಆಸೀಫ್ ಸೇಠ್ ಫೌಂಡೇಶನ್ ವತಿಯಿಂದ ತುರ್ತು ರಕ್ಷಣಾ ತಂಡಕ್ಕೆ ಅಂದಾಜು 2.5 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ಸ್ಕೂಬಾ ಡೈವಿಂಗ್ (Scuba Diving) ಉಪಕರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸುವ ಮೂಲಕ ಶಾಸಕರು ತಮ್ಮ ಬದ್ಧತೆಯನ್ನು ಈಡೇರಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ದುರಂತದ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿಯೊಂದಿಗೆ ಚರ್ಚಿಸಿದ್ದ ಶಾಸಕರು, ತಂಡದ ಬಳಿ ನೀರಿನಲ್ಲಿ ಆಳಕ್ಕೆ ಇಳಿದು ಕಾರ್ಯಾಚರಣೆ ನಡೆಸಲು ಅಗತ್ಯವಾದ ಆಧುನಿಕ ಸ್ಕೂಬಾ ಡೈವಿಂಗ್ ಉಪಕರಣಗಳ ಕೊರತೆ ಇರುವುದನ್ನು ಮನಗಂಡಿದ್ದರು. ಸಿಬ್ಬಂದಿಯ ಜೀವದ ರಿಸ್ಕ್ ಮತ್ತು ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಶೀಘ್ರದಲ್ಲೇ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುವುದಾಗಿ ಶಾಸಕರು ಭರವಸೆ ನೀಡಿದ್ದರು.

ಈ ಅತ್ಯಾಧುನಿಕ ಸ್ಕೂಬಾ ಕಿಟ್‌ಗಳ ಲಭ್ಯತೆಯಿಂದಾಗಿ, ಇನ್ಮುಂದೆ ನೀರಿನಲ್ಲಿ ನಡೆಯುವ ರಕ್ಷಣಾ ಕಾರ್ಯಾಚರಣೆಗಳು ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ರಕ್ಷಣಾ ತಂಡದ ಸಾಮರ್ಥ್ಯ ಮತ್ತು ಸನ್ನದ್ಧತೆ ಮತ್ತಷ್ಟು ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, “ರಕ್ಷಣಾ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಾರ್ವಜನಿಕರ ಜೀವ ಉಳಿಸುವ ಪವಿತ್ರ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅತ್ಯುತ್ತಮ ಉಪಕರಣಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ವಿಪತ್ತು ಸನ್ನದ್ಧತೆಯನ್ನು ಬಲಪಡಿಸುವುದು ಮತ್ತು ಮುಂಚೂಣಿ ರಕ್ಷಣಾ ತಂಡಗಳಿಗೆ ಬೆಂಬಲ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದರು. ಭರವಸೆ ಈಡೇರಿಸಿದ ಶಾಸಕ ಆಸೀಫ್ ಸೇಠ್, ಅಮಾನ್ ಸೇಠ್ ಹಾಗೂ ಆಸೀಫ್ ಸೇಠ್ ಫೌಂಡೇಶನ್‌ಗೆ ರಕ್ಷಣಾ ತಂಡದ ಸದಸ್ಯರು ಈ ವೇಳೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

Tags:

error: Content is protected !!