ಖಾನಾಪುರ ತಾಲೂಕಿನ ನಂದಗಡದಲ್ಲಿ ಮರಗಳು ಧರೆಗುರುಳುವ ಸರಣಿ ಮುಂದುವರಿದಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಭೀತಿ ಪಡುವಂತಾಗಿದೆ. ನಿನ್ನೆಯಷ್ಟೇ ಮಾವಿನ ಮರ ಬಿದ್ದು ದುರಂತ ಸಂಭವಿಸಿದ್ದ ಜಾಗದ ಬಳಿಯೇ ಇಂದು ಮತ್ತೊಂದು ಮರ ಉರುಳಿ ಬಿದ್ದಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಖಾನಾಪುರ ತಾಲೂಕಿನ ನಂದಗಡ-ಬೀಡಿ ರಸ್ತೆಯ ಸರ್ಕಾರಿ ಆಸ್ಪತ್ರೆಯ ತಿರುವಿನಲ್ಲಿ ಇಂದು ಮತ್ತೆ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಖಾನಾಪುರ-ಹಳಿಯಾಳ ರಾಜ್ಯ ಹೆದ್ದಾರಿಯ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ನಿನ್ನೆಯಷ್ಟೇ ಇದೇ ಮಾರ್ಗದಲ್ಲಿ ಮಾವಿನ ಮರ ಬಿದ್ದು ಇಬ್ಬರು ದ್ವಿಚಕ್ರ ವಾಹನ ಸವಾರರು ಗಾಯಗೊಂಡು, ವಾಹನಗಳು ಜಖಂಗೊಂಡ ಘಟನೆ ಮಾಸುವ ಮುನ್ನವೇ ಈ ದುರಂತ ಮರುಕಳಿಸಿದೆ. ಪದೇ ಪದೇ ಮರಗಳು ಬೀಳುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸಲು ಸಾರ್ವಜನಿಕರು ತೀವ್ರ ಭಯಭೀತರಾಗಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನವೇ ಅರಣ್ಯ ಇಲಾಖೆಯ ಅಧಿಕಾರಿಗಳು ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಯೋಗ್ಯ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
