ಬೆಳಗಾವಿ ಜಿಲ್ಲೆಯಲ್ಲಿ ವಿಶೇಷ ಚೇತನರ ಹಕ್ಕುಗಳು ಮತ್ತು ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರಂತರ ಪಿಂಚಣಿ ವಿಳಂಬದಿಂದಾಗಿ ಅಂಗವಿಕಲರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘವು ಜಿಲ್ಲಾಧಿಕಾರಿಗಳಿಗೆ ಮಹತ್ವದ ಮನವಿ ಸಲ್ಲಿಸಿದೆ. ವಿಕಲಚೇತರನ ಮಾಶಾಸನವನ್ನು ಹೆಚ್ಚಿಸುವಂತೆ ಆಗ್ರಹಿಸಿದೆ.

ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ವಿಶೇಷ ಚೇತನರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಶೇಕಡಾ ೫ ರಷ್ಟು ಮೀಸಲು ಅನುದಾನ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಹೋರಾಟಗಾರ ಕೃಷ್ಣಾ ಹಿತ್ತಲಮನಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಮನವಿಯನ್ನು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ತಮ್ಮ ಹಕ್ಕುಗಳನ್ನು ಕೇಳಲು ಪಂಚಾಯತ್ ಕಚೇರಿಗಳಿಗೆ ತೆರಳುವ ಅಂಗವಿಕಲರಿಗೆ ಅಧಿಕಾರಿಗಳಿಂದ ಯಾವುದೇ ಸೂಕ್ತ ಗೌರವ ಸಿಗುತ್ತಿಲ್ಲ ಹಾಗೂ ಅವರ ಅಹವಾಲುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದರ ಜೊತೆಗೆ, ಕಳೆದ ಮೂರು-ನಾಲ್ಕು ತಿಂಗಳಿಂದ ಮಾಶಾಸನವು ಸರಿಯಾಗಿ ಬಿಡುಗಡೆಯಾಗದ ಕಾರಣ, ಕೇವಲ ಪಿಂಚಣಿ ಹಣವನ್ನೇ ನಂಬಿ ಜೀವನ ಸಾಗಿಸುತ್ತಿರುವ ನೂರಾರು ವಿಶೇಷ ಚೇತನರ ಕುಟುಂಬಗಳು ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಪ್ರಸ್ತುತ ವಿಶೇಷ ಚೇತನರಿಗೆ ನೀಡಲಾಗುತ್ತಿರುವ ೮೦೦ ಮತ್ತು ೧೨೦೦ ರೂಪಾಯಿಗಳ ಪಿಂಚಣಿ ಮೊತ್ತವು ಇಂದಿನ ದುಬಾರಿ ದಿನಗಳಲ್ಲಿ ಜೀವನ ನಿರ್ವಹಣೆ ಹಾಗೂ ವೈದ್ಯಕೀಯ ವೆಚ್ಚಗಳಿಗೆ ತೀರಾ ಅಪೂರ್ಣವಾಗಿದೆ. ಆದ್ದರಿಂದ, ಸರ್ಕಾರವು ಕನಿಷ್ಠ ಪಿಂಚಣಿ ಮೊತ್ತವನ್ನು ೨,೫೦೦ ರೂಪಾಯಿಗಳಿಗೆ ಹೆಚ್ಚಿಸಬೇಕು ಮತ್ತು ಅಂಗವೈಕಲ್ಯದ ತೀವ್ರತೆಯ ಶೇಕಡಾವಾರು ಆಧಾರದ ಮೇಲೆ ಹೆಚ್ಚುವರಿ ಪಿಂಚಣಿಯನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘವು ಒತ್ತಾಯಿಸಿದೆ. ಈ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಪ್ರತಿ ಪಂಚಾಯತ್ ಮಟ್ಟದಲ್ಲಿ ಸೂಕ್ತ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕೆಂದು ಕೃಷ್ಣಾ ಹಿತ್ತಲಮನಿ ಅವರು ಲಿಖಿತ ಮನವಿಯ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಾಪ್ ಕಾಂಬಳೆ, ಪ್ರವೀಣ್ ದೇವರಮನಿ ಸೇರಿದಂತೆ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದ ಇನ್ನುಳಿದ ಕಾರ್ಯಕರ್ತರು ಭಾಗಿಯಾಗಿದ್ಧರು.
