ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ ಬಿಎಲ್ಒಗಳು ಕಾಂಗ್ರೆಸ್ ನಾಯಕರ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷ ಧನಂಜಯ ಜಾಧವ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ಕುರಿತು ಜಿಲ್ಲಾಡಳಿತ ಹಾಗೂ ತಹಶೀಲ್ದಾರರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಣೇಶಪುರದಲ್ಲಿ ಮುಜಾವರ್ ಎಂಬ ಕಾಂಗ್ರೆಸ್ ನಾಯಕರ ಕಾರ್ಯಾಲಯದಲ್ಲಿ ಬಿಎಲ್ಒಗಳು ಸಾರ್ವಜನಿಕರನ್ನು ಕರೆಸಿ ಅರ್ಜಿಗಳನ್ನು ತುಂಬುವ ಹಾಗೂ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಧನಂಜಯ ಜಾಧವ್ ಆರೋಪಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಂತಹ ಮಹತ್ವದ ಪ್ರಕ್ರಿಯೆಯು ಮಸೀದಿ, ಮದರಸಾ, ಶಾಲೆ ಹಾಗೂ ಕಾಂಗ್ರೆಸ್ ನಾಯಕರ ಮನೆ ಮತ್ತು ಕಾರ್ಯಾಲಯಗಳಲ್ಲಿ ನಡೆಯುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಸರ್ಕಾರಿ ನೌಕರರೋ ಅಥವಾ ಕಾಂಗ್ರೆಸ್ ಕಾರ್ಯಕರ್ತರೋ ಎಂದು ಕಿಡಿಕಾರಿದ ಅವರು, ಈ ಅಕ್ರಮಗಳು ತಕ್ಷಣವೇ ನಿಲ್ಲದಿದ್ದರೆ ತಾವೆಲ್ಲರೂ ಡಿಸಿ ಆಫೀಸ್ಗೆ ಮುತ್ತಿಗೆ ಹಾಕಿ ಉತ್ತರ ಕೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
