ಖಾನಾಪೂರ ತಾಲೂಕಿನ ನಂದಗಡದ ಪ್ರತಿಭಾನ್ವಿತ ವಿದ್ಯಾರ್ಥಿನಿ ಆಫೀಯಾ ವಾಹೀದ್ ಸಕಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 95.20 ರಷ್ಟು ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಖಾನಾಪೂರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಬಾಬು ಹತ್ತರವಾಡ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಅವಳನ್ನು ಆತ್ಮೀಯವಾಗಿ ಸತ್ಕರಿಸಿ ಗೌರವಿಸಲಾಯಿತು.

ತಮ್ಮ ನಿರಂತರ ಸಾಮಾಜಿಕ ಚಟುವಟಿಕೆಗಳ ಮೂಲಕ ಖಾನಾಪೂರ ತಾಲೂಕಿನಲ್ಲಿ ಜನಸಾಮಾನ್ಯರ ಮನೆಮಾತಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಅವರು, ಗ್ರಾಮೀಣ ಭಾಗದ ಪ್ರತಿಭೆ ಆಫೀಯಾಳ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ವಿದ್ಯಾರ್ಥಿನಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲು ಹೊದಿಸಿ ಸತ್ಕರಿಸಿದ ಅವರು, ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಹರಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಂದಗಡ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮಹಮ್ಮದ್ ಶಫೀ ಖಾಜಿ, ಪ್ರಮುಖರಾದ ಮಹೇಶ್ ಮಾದಾರ, ರಮೇಶ್ ಖನಗಾಂವಿ, ಕಿರಣ್ ತೆಗೋರ ಸೇರಿದಂತೆ ಊರಿನ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ವಿದ್ಯಾರ್ಥಿನಿಯ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದರು.

