Uncategorized

ಕನ್ನಡ ಶಾಲೆಗಳ ಮುಚ್ಚಲು ಮಹಾರಾಷ್ಟ್ರ ಕುತಂತ್ರ? ಕಡ್ಡಾಯ ಮರಾಠಿ ಟಿಇಟಿ ವಿರೋಧಿಸಿ ಬೆಳಗಾವಿಯಲ್ಲಿ ಕರವೇ ಪ್ರಾದೇಶಿಕರ ಆಯುಕ್ತರಿಗೆ ಮನವಿ

Share

ಮಹಾರಾಷ್ಟ್ರದಲ್ಲಿರುವ ನೂರಕ್ಕೂ ಹೆಚ್ಚು ಕನ್ನಡ ಸರ್ಕಾರಿ ಶಾಲೆಗಳನ್ನು ಹಂತ-ಹಂತವಾಗಿ ಮುಚ್ಚಲು ಅಲ್ಲಿನ ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಂಭೀರ ಆರೋಪ ಮಾಡಿದೆ. ಕನ್ನಡ ಶಿಕ್ಷಕರಿಗೆ ಕಡ್ಡಾಯವಾಗಿ ಮರಾಠಿ ಭಾಷೆಯಲ್ಲೇ ಟಿಇಟಿ ಪರೀಕ್ಷೆ ಬರೆಯುವಂತೆ ಒತ್ತಾಯಿಸುತ್ತಿರುವುದನ್ನು ಖಂಡಿಸಿ ಕರವೇ ಟಿ.ಎ.ನಾರಾಯಣಗೌಡ ಬಣದ ಪದಾಧಿಕಾರಿಗಳು ಇಂದು ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರಿಗೆ ಮಹತ್ವದ ಮನವಿ ಸಲ್ಲಿಸಿದರು.


ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕರವೇ ಜಿಲ್ಲಾ ಮುಖಂಡ ದೀಪಕ್ ಗುಡಗನಟ್ಟಿ, ಮಹಾರಾಷ್ಟ್ರ ಸರ್ಕಾರದ ಧೋರಣೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಕನ್ನಡದಲ್ಲೇ ಪರೀಕ್ಷೆ ನಡೆಸಲು ಕೋರಿದ್ದರೂ ಅಲ್ಲಿನ ಸರ್ಕಾರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ತಕ್ಷಣವೇ ವಿಶೇಷ ಅಧಿಕಾರಿಗಳ ನಿಯೋಗವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳಬೇಕು ಹಾಗೂ ಗಡಿಭಾಗದ ಕನ್ನಡ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಮಹಾರಾಷ್ಟ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರಿಸಿದರೆ ಕರ್ನಾಟಕದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ಸುರೇಶ್ ಗವನ್ನವರ, ಮಹಾರಾಷ್ಟ್ರ ರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಟಿಇಟಿ ಪರೀಕ್ಷೆಯನ್ನು ಸ್ಥಳೀಯ ಮರಾಠಿ ಭಾಷೆಯಲ್ಲೇ ಬರೆಯುವಂತೆ ಒತ್ತಾಯಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು. ಈ ಮರಾಠಿ ಹೇರಿಕೆಯಿಂದಾಗಿ ನಮ್ಮ ಅರ್ಹ ಕನ್ನಡ ಶಿಕ್ಷಕರಿಗೆ ಭಾರಿ ಅನ್ಯಾಯವಾಗುತ್ತಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ತಕ್ಷಣವೇ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಗಡಿಭಾಗದ ಕನ್ನಡ ಶಾಲೆಗಳು ಮತ್ತು ಶಿಕ್ಷಕರ ಹಿತರಕ್ಷಣೆಗೆ ಹೆಚ್ಚಿನ ಒತ್ತು ನೀಡಿ, ಅಲ್ಲಿನ ಶಿಕ್ಷಕರಿಗೆ ನ್ಯಾಯ ಕೊಡಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಕರವೇ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!