Vijaypura

ಭೋವಿ ಸಮುದಾಯಕ್ಕೆ ಎಸ್‌ಸಿ ಪ್ರಮಾಣ ಪತ್ರ ವಿತರಣೆಯಲ್ಲಿ ತೊಂದರೆ: ವಡ್ಡರ ಸಮುದಾಯದ ವಿರುದ್ಧ ಲಕ್ಷ್ಮಣ ಭೋವಿ ಆರೋಪ

Share

ವಡ್ಡರ ಮತ್ತು ಭೋವಿ ಎರಡು ಪ್ರತ್ಯೇಕ ಜಾತಿಗಳಾಗಿದ್ದು, ಭೋವಿ ಸಮುದಾಯದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನೈಜ ಭೋವಿ ಸಮುದಾಯ ದವರಿಗೆ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣ ಪತ್ರ ಪಡೆಯಲು ತೊಂದರೆಯಾಗುತ್ತಿದೆ ಎಂದು ಭೋವಿ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ ಆರೋಪಿಸಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮುದಾಯವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಸಮುದಾಯದವರಿಗೆ ಸರ್ಕಾರ ದಿಂದ ದೊರೆಯಬೇಕಾದ ಸೌಲಭ್ಯಗಳು ಹಾಗೂ ಎಸ್‌ಸಿ ಪ್ರಮಾಣ ಪತ್ರ ಸಿಗುವಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು. ಕೆಲವು ತಾಲೂಕುಗಳಲ್ಲಿ “ಬೆಸ್ತರ ಭೋವಿ” ಎಂಬ ಕಾರಣ ನೀಡಿ ನೈಜ ಭೋವಿ ಸಮುದಾಯದವರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ ಮತ್ತು ಮೀಸಲಾತಿ ಸೌಲಭ್ಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಅವರ ಭವಿಷ್ಯ ಅತಂತ್ರವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಡ್ಡರ ಮತ್ತು ಭೋವಿ ಸಮುದಾಯಗಳು ಸಂಪೂರ್ಣ ವಾಗಿ ಪ್ರತ್ಯೇಕ ಜಾತಿಗಳಾಗಿದ್ದು, ಈ ಕುರಿತು ಸರ್ಕಾರ ಸ್ಪಷ್ಟ ಕ್ರಮ ಕೈಗೊಂಡು ನೈಜ ಭೋವಿ ಸಮುದಾಯ ದವರಿಗೆ ಯಾವುದೇ ಅಡೆತಡೆ ಇಲ್ಲದೆ ಎಸ್‌ಸಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು. ಈ ವೇಳೆ ಅವರು, ಶಿವರಾಜ ತಂಗಡಗಿ ಸೇರಿದಂತೆ ಕೆಲವರು ಸುಳ್ಳು ದಾಖಲಾತಿಗಳ ಆಧಾರದಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿದರು.

Tags:

error: Content is protected !!