ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಆಸ್ತಿ ಹಂಚಿಕೆ ಹಾಗೂ ಜಮೀನು ಸರ್ವೆ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಅವಳಿ ಕೊಲೆ ನಡೆದಿದೆ. ಮನೆಗೆ ನುಗ್ಗಿ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಬ್ಬರನ್ನು ಬಲಿಪಡೆಯಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ (ಯರಗಟ್ಟಿ) ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ನುಗ್ಗಾನಟ್ಟಿ ಗ್ರಾಮದಲ್ಲಿ ಆಸ್ತಿ ಹಾಗೂ ಜಮೀನು ಹಂಚಿಕೆ ವಿಚಾರವಾಗಿ ತಲೆದೋರಿದ ಸಿವಿಲ್ ವಿವಾದವು ಭೀಕರ ಅವಳಿ ಕೊಲೆಯಲ್ಲಿ ಅಂತ್ಯವಾಗಿದೆ. ಮೃತರನ್ನು ಬಸಪ್ಪ ಫಕೀರಪ್ಪ ರಾಮಣ್ಣವರ್ ಮತ್ತು ಲಕ್ಕಪ್ಪ ಫಕೀರಪ್ಪ ರಾಮಣ್ಣವರ್ ಎಂದು ಗುರುತಿಸಲಾಗಿದೆ. ಜಮೀನು ಸರ್ವೆ ಕಾರ್ಯ ಮುಗಿದ ಬಳಿಕ ಅಣ್ಣವ್ವ ಹಾಗೂ ಆಕೆಯ ಗಂಡ ಯಲ್ಲಪ್ಪ ಅವರ ನಡುವಿನ ಕೌಟುಂಬಿಕ ಕಲಹ ಮತ್ತು ಆಸ್ತಿಯಲ್ಲಿ ಪಾಲು ಕೇಳುವ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ನಡುರಾತ್ರಿ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಆರೋಪಿಗಳು ಸಂಘಟಿತರಾಗಿ, ಕೈಯಲ್ಲಿ ಬಡಿಗೆ, ಕಬ್ಬಿಣದ ರಾಡ್ ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಬಂದು ಮನೆಗೆ ನುಗ್ಗಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಫಕೀರಪ್ಪ ನೀಲಪ್ಪ ರಾಮಣ್ಣವರ್ ಸೇರಿದಂತೆ ಮನೆಯಲ್ಲಿದ್ದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುರಗೋಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಆರು ಜನ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಡಿಎಸ್ಪಿ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಭೀಕರ ಕೃತ್ಯಕ್ಕೆ ಇನ್ನು ಯಾರಾದರೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ನೀಡಿದ್ದಾರೆಯೇ ಅಥವಾ ರೌಡಿಶೀಟರ್ಗಳ ಭಾಗೀದಾರಿಕೆ ಇದೆಯೇ ಎಂಬ ಕುರಿತು ಎಲ್ಲಾ ಆಯಾಮಗಳಿಂದ ಮುರಗೋಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
