Uncategorized

ನಂದಗಡದಲ್ಲಿ ನಾಲ್ಕು ದಿನಗಳಿಂದ ಕತ್ತಲೆ ಭಾಗ್ಯ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ, ಮೊಬೈಲ್ ನೆಟ್‌ವರ್ಕ್ ಇಲ್ಲದೆ ಆಡಳಿತವೂ ಅಸ್ತವ್ಯಸ್ತ!

Share

ಖಾನಾಪುರ ತಾಲೂಕಿನ ನಂದಗಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸರಬರಾಜು ಸಂಪೂರ್ಣ ಕಡಿತಗೊಂಡಿದೆ. ನಿರಂತರ ಮಳೆಯ ನೆಪವೊಡ್ಡಿ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಜನಜೀವನ ಸಂಪೂರ್ಣ ನರಕಸದೃಶವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಂದಗಡ ವಲಯದಲ್ಲಿ ವಿದ್ಯುತ್ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಮರಗಳು ಬಿದ್ದು ತಂತಿಗಳು ತುಂಡಾಗಿರುವುದು ಹಾಗೂ ಟ್ರಾನ್ಸ್‌ಫಾರ್ಮರ್‌ಗಳು ಕೈಕೊಟ್ಟಿರುವುದರಿಂದ ಸಾರ್ವಜನಿಕರು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸತತ ದಿನಗಳಿಂದ ವಿದ್ಯುತ್ ಇಲ್ಲದ ಕಾರಣ ಮನೆಗಳಲ್ಲಿದ್ದ ಇನ್ವರ್ಟರ್‌ಗಳು ಕೂಡ ನಿಷ್ಕ್ರಿಯಗೊಂಡಿದ್ದು, ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ಈ ಕುರಿತು ಅಸಮಾಧಾನ ಹಂಚಿಕೊಂಡಿರುವ ಸ್ಥಳೀಯರು ಹಾಗೂ ಗ್ರಾಮಸಹಾಯಕರಾದ ಇಬ್ರಾಹಿಂ ತಹಶೀಲ್ದಾರ್ ಅವರು, ಸರ್ಕಾರದ ಮಹತ್ವದ ‘ಎಸ್ಐಆರ್ ಫಾರ್ಮೇಟ್’ ವಿತರಿಸುವ ತುರ್ತು ಕೆಲಸಕ್ಕೆ ವಿದ್ಯುತ್ ಇಲ್ಲದೆ ತೀವ್ರ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ. ಮೊಬೈಲ್‌ಗಳು ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿರುವುದರಿಂದ, ಅಧಿಕಾರಿಗಳನ್ನು ಮತ್ತು ಗ್ರಾಮದ ಹೊರಗೆ ಹೋಗಿರುವ ಸಾರ್ವಜನಿಕರನ್ನು ಸಂಪರ್ಕಿಸಲು ಸಾಧ್ಯವಾಗದೆ ಆಡಳಿತಾತ್ಮಕ ಕೆಲಸಗಳೂ ಸ್ಥಗಿತಗೊಂಡಿವೆ.

ಇನ್ನೊಂದೆಡೆ, ನಿರಂತರ ಕತ್ತಲೆಯಿಂದಾಗಿ ಸ್ಥಳೀಯ ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತಿದೆ. ವಿದ್ಯುತ್ ವ್ಯತ್ಯಯದ ಕುರಿತು ಹೆಸ್ಕಾಂ ಕಚೇರಿಗೆ ಮೇಲಿಂದ ಮೇಲೆ ಕರೆ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ. ನೆಪಗಳನ್ನು ಹೇಳುವುದನ್ನು ಬಿಟ್ಟು ಇಲಾಖೆಯು ಯುದ್ಧೋಪಾದಿಯಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ತಕ್ಷಣವೇ ವಿದ್ಯುತ್ ಸಂಪರ್ಕ ಪುನಃಸ್ಥಾಪಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ನಂದಗಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Tags:

error: Content is protected !!