ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿರುವ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆ ವೇಳೆ ಸಂಭವಿಸಿದ ಅವಘಡದಲ್ಲಿ ವಿಜಯಪುರ ಮೂಲದ ಯುವಕ ಕುಬೇರ ಸುರಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಜುಲೈ 3ರಂದು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ರೆಸಾರ್ಟ್‌ಗೆ ತೆರಳಿದ್ದ ವೇಳೆ ಜಿಪ್‌ಲೈನ್‌ನ ಸುರಕ್ಷತಾ ಲಾಕ್ ಏಕಾಏಕಿ ತುಂಡಾಗಿ, ಸುಮಾರು 30ರಿಂದ 40 ಅಡಿ ಎತ್ತರದಿಂದ ಕುಬೇರ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಅವರಿಗೆ ಎರಡೂ ಕೈ ಹಾಗೂ ಎರಡೂ ಕಾಲಿನ ಎಲುಬುಗಳು ಮುರಿದಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ. ಅವಘಡದ ತಕ್ಷಣ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕೈ ಮತ್ತು ಕಾಲುಗಳಿಗೆ ಇನ್ನಷ್ಟು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಅವಘಾತ ಸಂಭವಿಸಿದ ಕ್ಷಣಗಳ ದೃಶ್ಯ ಕುಬೇರ ಅವರ ಸಹೋದರ ಪ್ರಶಾಂತ್ ಅವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ಘಟನೆ ಜಿಪ್‌ಲೈನ್ ಸಾಹಸ ಕ್ರೀಡೆಗಳ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

