ಸಾಧನೆಯ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಶ್ರಮದ ದುಡಿಮೆಯಿದ್ದರೆ ಬೇಕಾದಷ್ಟು ಹಣ ಮಾಡಬಹದು ಅನ್ನುವದಕ್ಕೆ ಉದಾಹರಣೆ ಈ ಯುವ ರೈತ. ನೋಡೊದಕ್ಕೆ ಸಿದಾ ಸಾದಾ ಕಂಡರೂ ಇವರೀಗ ಲಕ್ಷಾಧಿಪತಿ. ಪ್ರತಿ ದಿನವೂ ಇವರ ಆದಾಯ ಸದ್ಯಕ್ಕೆ ಹದಿನೈದರಿಂದ ಇಪ್ಪತ್ತು ಇಪ್ಪತ್ತು ಸಾವಿರ, ತಿಂಗಳಿಗೆ ನಾಲ್ಕರಿಂದ ಐದು ಲಕ್ಷ. ಬೇಸಿಗೆ ಸಂದರ್ಭದಲ್ಲಿ ಮಾತ್ರ ಬೆಳೆಯುವ ಮಾವನ್ನು ಇವರು ವರ್ಷವೀಡಿ ಬೆಳೆದು ಉತ್ತಮ ಲಾಭ ಪಡೆಯುತ್ತಿದ್ದಾರೆ. ಹಾಗಾದರೆ ಅದ್ಯಾವ ಮಾವು…? ಮಾವಿನೊಟ್ಟಿಗೆ ಇವರು ಬೆಳೆದಿದ್ದೇನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…


ಹೀಗೆ ವರ್ಷದ ಹನ್ನೆರಡು ತಿಂಗಳೂ ಕಾಯಿಬಿಟ್ಟು ಹಣ್ಣಾಗಿರುವ ಮಾವಿನ ಸಸಿಗಳು ಅವುಗಳ ಲಾಲನೆ ಪಾಲನೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ರೈತ ಕುಟುಂಬ. ಇವರು ಬೆಳೆದ ಮಾವಿನ ಬೆಳೆಯನ್ನು ನೋಡಲು ಗುಂಪು ಗುಂಪಾಗಿ ಬರುತ್ತಿರುವ ಸಾರ್ವಜನಿಕರು. ಅವರಿಗೆಲ್ಲ ತನ್ನ ಸಾಧನೆಯನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಯುವ ರೈತ. ಇಂತಹ ದೃಶ್ಯಗಳು ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ಹೊರವಲಯದಲ್ಲಿ. ಕಳೆದ ಹತ್ತು ವರ್ಷಗಳಿಂದ ಕೃಷಿ ಚಟುವಟಿಕೆಯತ್ತ ವಾಲಿಕೊಂಡಿರುವ ಈ ಯುವಕ ಕಲಿತದ್ದು ಬಿ.ಎ.ಪದವಿ. ಆರಂಭದಲ್ಲಿ ಕೆಲವು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದಾಗ ವಿದೇಶ ಪ್ರವಾಸದ ಅವಕಾಶ ಸಿಕ್ಕಿದ್ದು ಅಲ್ಲಿ ಹೋದಾಗ ಅಲ್ಲಿನ ಕೃಷಿಗೆ ಮಾರುಹೋಗಿ ಇವರು ಅಲ್ಲಿನ ಸಸಿಗಳನ್ನು ತಂದು ಪ್ರಾಯೋಗಿಕವಾಗಿ ಎಂಟು ಎಕರೆ ಜಮೀನಿನಲ್ಲಿ ಕೃಷಿಗೆ ಮುಂದಾಗುವ ಮೂಲಕ ಸದ್ಯ ಯಶಸ್ಸು ಸಾಧಿಸಿ ಬರದ ನಾಡಿನಲ್ಲಿ ಮಾದರಿ ರೈತ ಅನ್ನಿಸಿಕೊಂಡಿದ್ದಾರೆ. ಮಲೇಷಿಯಾ, ಥೈಲ್ಯಾಂಡ್ ಮತ್ತು ಶ್ರೀಲಂಕಾ ಪ್ರವಾಸ ಮಾಡಿ ಅಲ್ಲಿನ ಕೃಷಿ ಪದ್ಧತಿಯನ್ನು ನಮ್ಮದೇ ನೆಲದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾವಯವ ಪದ್ಧತಿಯಲ್ಲಿ ವರ್ಷದ ಹನ್ನೆರಡು ತಿಂಗಳು ಕೂಡ ಫಸಲು ಕೊಡುವ ಹಣ್ಣುಗಳ ರಾಜ ಅನ್ನಿಸಿಕೊಂಡ ಮಾವಿನ ಹಣ್ಣನ್ನು ತಮ್ಮ ಕೃಷಿ ಜಮೀನಿನಿಂದ ನೇರವಾಗಿ ಮಾವು ಪ್ರಿಯರ ಮನೆ ಬಾಗಿಲಿಗೆ ತಲುಪಿಸುತ್ತಿರುವದು ಇವರ ವೈಶಿಷ್ಟ್ಯ. ಇನ್ನೂ ಒಟ್ಟು ಎಂಟು ಎಕರೆಯಲ್ಲಿ ಜಪಾನನ ಅತಿ ದುಬಾರಿ ಬೆಲೆಯಲ್ಲಿ ಮಾರಾಟವಾಗುವ ಮಿಯಾಜಾಕಿ ಥಳಿಯ ನಲವತ್ತು ಮಾವಿನ ಮರ ಹಾಗೂ ಥೈಲ್ಯಾಂಡ್ ನಲ್ಲಿ ಬಹು ಬೇಡಿಕೆ ಇರುವ ವರ್ಷದ ಹನ್ನೆರಡು ತಿಂಗಳು ಹಣ್ಣು ಬಿಡುವ 3000 ಮಾವಿನ ಸಸಿಗಳನ್ನ ಹಾಗೂ ನೂರು ವಿಯೆಟ್ನಾಮ್ ಹಲಸು ಮತ್ತು ಸ್ಟ್ರಾಬೆರಿ, ನೇರಳೆ, ಸಂತ್ರಾ, ಹಾಗೂ ಪೇರು ಮತ್ತು ನಿಂಬೆ ಸೇರಿದಂತೆ ಒಟ್ಟು ವಿವಿಧ ವಿಶಿಷ್ಟ ಗಿಡಗಳನ್ನು ಬೆಳೆಸುವ ಮೂಲಕ ಹೊಸ ಪ್ರಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಹಿಮಾಚಲ ಥಳಿಯ ಎಚ್ ಆರ್ ಎಮ್ ಮಾವು, ಅಂಜೂರ ಹಾಗೂ ಕಾಜು ಗಿಡಗಳನ್ನು ಸಹ ಬೆಳೆಸಿರುವ ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಯಾವುದೇ ರಾಸಾಯನಿಕಗಳ ಬಳಕೆ ಮಾಡದೆ ಕೇವಲ ಜೀವಾಮೃತ, ಕೃಪಾಮೃತ ಮತ್ತು ಎರೆಹುಳು ಗೊಬ್ಬರ ಹಾಗೂ ಕೃಷಿ ಇಲಾಖೆಯ ಯೋಜನೆಯಾದ ಹನಿ ನೀರಾವರಿ ಪದ್ಧತಿಯ ಮೂಲಕ ಸದ್ಯ ಬರಡು ಭೂಮಿಯಲ್ಲಿ ಬಂಗಾರದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈಗಾಗಲೇ ಇವರಿಗೆ ಬೆಂಗಳೂರು, ಪೂನಾ, ಮುಂಬೈ ನಗರಗಳಿಂದ ಮಾವು ಪ್ರಿಯರು ಸಾವಯವ ಪದ್ಧತಿಯಲ್ಲಿ ಬೆಳೆದ ಮಾವಿನ ಹಣ್ಣಿಗಾಗಿ ಬೇಡಿಕೆ ಇಡುತ್ತಿದ್ದು ಯಾವುದೇ ಮಧ್ಯವರ್ತಿಗಳ ಸಹಾಯ ವಿಲ್ಲದೆ ಸದ್ಯ ಮಾವಿನ ಹಣ್ಣು ಮಾರಾಟ ಮಾಡುವ ಮೂಲಕ ಶಹಬ್ಬಾಶ್ ಅನ್ನಿಸಿಕೊಂಡಿದ್ದಾರೆ. ಇನ್ನೂ ಇವರ ಕೃಷಿ ಪದ್ಧತಿಯ ಬಗ್ಗೆ ಆರಂಭದಲ್ಲಿ ಕೊಂಕು ನುಡಿದಿದ್ದ ಜನರೂ ಕೂಡ ಸದ್ಯ ಇವರ ಯಶಸ್ಸು ನೋಡಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದು ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಯಶಸ್ಸು ಕಾಣಬಹುದಾಗಿದೆ ಎನ್ನುತ್ತಿದ್ದಾರೆ. ಸಾಕಷ್ಟು ಜನರು ಕೂಡಾ ಆಗಮಿಸಿ ಕುತೂಹಲದಿಂದ ಇವರು ಬೆಳೆದ ಹಣ್ಣು ವೀಕ್ಷಣೆ ಮಾಡುತ್ತಿದ್ದು, ಇವರ ಕೃಷಿ ಕಾಯಕಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ…
ಒಟ್ಟಾರೆ ಆಗಿ ಒಂದು ಕಾಲದಲ್ಲಿ ಬರ ಪೀಡಿತ ಜಿಲ್ಲೆ ಎಂದೇ ಹೆಸರಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಸದ್ಯ ಹಲವಾರು ಯುವ ರೈತರು ಹೊಸ ಹೊಸ ಕೃಷಿ ಪ್ರಯೋಗಗಳನ್ನು ಮಾಡುತ್ತ ಬದುಕು ಕಟ್ಟಿಕೊಳ್ಳುತ್ತಿರುವದು ಸಂತಸದ ವಿಷಯವಾಗಿದ್ದು ಸ್ವಾದಿಷ್ಟ ಹಾಗೂ ಬಹು ಬೇಡಿಕೆಯ ಹಣ್ಣುಗಳ ಕೃಷಿಯ ಮೂಲಕ ಸತತ ಪರಿಶ್ರಮದಿಂದ ಪರಿಶುದ್ದ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಯುವ ರೈತ ನವೀನ ಮಂಗಾನವರ ಮಾದರಿಯೇ ಸರಿ…
