ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದ್ದ ಆರು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ 12 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.


ಮೇ 29ರಂದು ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಡೆದಿದ್ದ ಭೀಕರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಈಶ್ವರಗೌಡ ಕಲ್ಲಣಗೌಡ ಪಾಟೀಲ್, ಅಪ್ಪುಗೌಡ ಲಗಮಗೌಡ ಪಾಟೀಲ್, ಈಶ್ವರಪ್ಪ ಲಗಮಗೌಡ ಪಾಟೀಲ್, ಬಸವರಾಜ ಲಸಮಯ್ಯ ಮಠಪತಿ, ಪ್ರಶಾಂತ್ ಬಸವರಾಜ ಪಾಟೀಲ್, ಸಿದ್ದರಾಮ ಕಲ್ಲಣಗೌಡ ಪಾಟೀಲ್, ಲಯಪ್ಪ ನೇಮಪ್ಪ ಬಿರಾದಾರ, ಅನಿಲಕುಮಾರ ಮಂದೇವ ಕೋಲಿ, ಬಸಿರ್ ಅಜೀಜ್ ಶೇಖ್, ಶ್ರೀರಾಮ ಶಂಕರಪ್ಪ ಬಿರಾದಾರ, ಪ್ರಕಾಶ ಮಾದೇವ ಜಾವರೇಕರ್ ಹಾಗೂ ಅಪ್ಪಣ್ಣ ಶಂಕರ ಭೋವಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಂದು ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
