Vijaypura

ಸೇವೆಯ ಸುವರ್ಣ ಪಯಣಕ್ಕೆ ಕೃತಜ್ಞತೆಯ ಕಿರೀಟ: ಶಿಕ್ಷಕ ಶಿವಶರಣ ಕ. ಗುಗ್ಗರಿಯವರ ಅಭಿನಂದನೆ ಹಾಗೂ ಷಷ್ಠಿಪೂರ್ತಿ ಸಮಾರಂಭ ವೈಭವ

Share

ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ದೇವರನಾವದಗಿ ಗ್ರಾಮದಲ್ಲಿ ಶಿಕ್ಷಣ ಕ್ಷೇತ್ರದ ದೀರ್ಘಕಾಲದ ಸೇವಾ ತಪಸ್ವಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಆದರ್ಶ ಶಿಕ್ಷಕರಾದ ಶಿವಶರಣ ಕ. ಗುಗ್ಗರಿ ಅವರ ಅಭಿನಂದನೆ ಮತ್ತು ಷಷ್ಠಿಪೂರ್ತಿ ಸಮಾರಂಭವು ಭಾನುವಾರ ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದ ವಾತಾವರಣದಲ್ಲಿ ಜರುಗಿತು.

ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ, ದೇವರನಾವದಗಿ ಹಾಗೂ ಎಸ್.ಕೆ. ಗುಗ್ಗರಿ ಶಿಕ್ಷಕರ ಅಭಿಮಾನಿ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಗುರು-ಶಿಷ್ಯರ ಅಮರ ಬಂಧಕ್ಕೆ ಸಾಕ್ಷಿಯಾಯಿತು. ಗುಗ್ಗರಿ ಅವರ ಕೈಯಲ್ಲಿ ಅಕ್ಷರಜ್ಞಾನ ಪಡೆದ ನೂರಾರು ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಬಂಧುಬಳಗದವರು ಪುಷ್ಪವೃಷ್ಟಿಗೈದು ಗೌರವ ಸಮರ್ಪಿಸಿದರು. ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿದ ಶಿಷ್ಯರು ಭಾವುಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿದ್ದರು. ಪೂಜ್ಯ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದರೆ, ಪೂಜ್ಯಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು. ಸಿಂದಗಿ ಶಾಸಕ ಅಶೋಕ ಮಗನೂಳಿ ಇವರ ಪತ್ನಿ ನಾಗರತ್ನ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕರಾದ ವಿಶ್ವನಾಥ ಎಸ್. ಶಿರಶ್ಯಾಡ ಹಾಗೂ ಖ್ಯಾತ ಪ್ರವಚನಕಾರ ಶ್ರೀಶೈಲ ಎಸ್. ಬಿರಾದಾರ ಭಾಗವಹಿಸಿ ಗುಗ್ಗರಿ ಅವರ ಶಿಕ್ಷಣ ಕ್ಷೇತ್ರದ ಅಮೋಘ ಕೊಡುಗೆಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಡಾ. ವನಜಾಕ್ಷಿ ಮಹೇಂದ್ರ ಗುಗ್ಗರಿ, ವಿ.ಎಸ್. ಬಿರಾದಾರ, ಶಿವಶರಣ ಯ. ಗುಂದಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅಲ್ಲದೆ ಶ್ರೀ ಎಸ್.ಕೆ. ಗುಗ್ಗರಿ ಅವರ ನಿವೃತ್ತ ಸಹೋದ್ಯೋಗಿಗಳು, ಹಿರಿಯ ಸಹೋದರರು ಹಾಗೂ ಬಂಧುಗಳಿಗೆ ಗೌರವ ಸಮರ್ಪಿಸಲಾಯಿತು. ಇನ್ನೂ “ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ; ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿ” ಎಂಬ ಸಂದೇಶವನ್ನು ಸಾರಿದ ಈ ಸಮಾರಂಭವು ಶಿಕ್ಷಣ ಸೇವೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು. ಜೀವನದ ಅರವತ್ತು ವಸಂತಗಳನ್ನು ಪೂರೈಸಿದ ಗುಗ್ಗರಿ ಅವರ ಸಾಧನಾ ಪಯಣಕ್ಕೆ ಸಮಾಜದ ವಿವಿಧ ವರ್ಗಗಳ ಜನರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Tags:

error: Content is protected !!