ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಐಪಿಎಲ್ ಕಿರೀಟ ಮುಡಿಗೇರಿಸುತ್ತಿದ್ದಂತೆಯೇ ವಿಜಯಪುರ ನಗರದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ಗೆಲುವಿನ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿದರು. ಈ ಕುರಿತು ಇಲ್ಲಿದೆ ಒಂದು ವರದಿ…


ಆರ್‌ಸಿಬಿ ತಂಡದ ಐಪಿಎಲ್ ಗೆಲುವಿಗೆ ಸಮೀಪದಲ್ಲಿರುವಾಗಲೇ ವಿಜಯಪುರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಾವಿರಾರು ಯುವಕ-ಯುವತಿಯರು ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಅಭಿಮಾನಿಗಳು “ಈ ಸಲವೂ ಕಪ್ ನಮ್ದೇ” ಎಂಬ ಘೋಷಣೆಗಳನ್ನು ಕೂಗುತ್ತಾ, ಸಿಳ್ಳೆ, ಚಪ್ಪಾಳೆ ಹಾಗೂ ಕುಣಿತದ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ನಗರದ ವಿವಿಧ ಭಾಗಗಳಿಂದ ಬೈಕ್ ಹಾಗೂ ಕಾರುಗಳಲ್ಲಿ ಬಂದ ಅಭಿಮಾನಿಗಳು ವಾಹನಗಳ ಮೇಲೆ ನಿಂತು ಸಂಭ್ರಮಾಚರಣೆ ನಡೆಸಿದರು. ಹಲವರು ಆರ್‌ಸಿಬಿ ಧ್ವಜಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.


ಇನ್ನೂ ಕಾರ್‌ಗಳಲ್ಲಿ ಅಳವಡಿಸಿದ್ದ ಡಿಜೆ ಸೌಂಡ್‌ಗೆ ಯುವಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮಹಾತ್ಮಾ ಗಾಂಧಿ ವೃತ್ತ ಹಾಗೂ ಸಿದ್ದೇಶ್ವರ ದೇವಸ್ಥಾನದ ಸುತ್ತಮುತ್ತ ಜನಸಾಗರವೇ ನೆರೆದಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗೊಂಡಿದ್ದು, ಎಲ್ಲೆಡೆ ಆರ್‌ಸಿಬಿ ಅಭಿಮಾನಿಗಳದ್ದೇ ಹವಾ ಕಂಡುಬಂತು.
ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆ ಯಾಗಿದ್ದು, ಕೆಲವೆಡೆ ನಿಯಂತ್ರಣ ತಪ್ಪಿ ರಸ್ತೆಗೆ ಇಳಿದ ಅಭಿಮಾನಿ ಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಆದರೂ ಅಭಿಮಾನಿಗಳ ಉತ್ಸಾಹ ಮಾತ್ರ ಕಡಿಮೆಯಾಗದೇ, ತಡರಾತ್ರಿವರೆಗೂ ವಿಜಯಪುರ ನಗರದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮ ಮುಂದುವರಿಯಿತು. ಹಲವು ವರ್ಷಗಳ ನಿರೀಕ್ಷೆಯ ಬಳಿಕ ಮತ್ತೊಮ್ಮೆ ಕಪ್ ಗೆದ್ದ ನೆಚ್ಚಿನ ತಂಡದ ಸಾಧನೆಯನ್ನು ಅಭಿಮಾನಿಗಳು ಐತಿಹಾಸಿಕ ಕ್ಷಣವೆಂದು ಸಂಭ್ರಮಿಸಿದರು.
ಒಟ್ಟಾರೆ ಆರ್‌ಸಿಬಿ ತಂಡದ ಐಪಿಎಲ್ ಗೆಲುವು ವಿಜಯಪುರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದು, ಸಾವಿರಾರು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ತಮ್ಮ ನೆಚ್ಚಿನ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ಸಲಾನೂ ಕಪ್ ನಮ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು…
