ಕರ್ನಾಟಕ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ಬೆಳಗಾವಿಯಲ್ಲಿ ಕೈಗಾರಿಕಾ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.


ಸರ್ಕಾರದ ಕನಿಷ್ಠ ವೇತನ ಹೆಚ್ಚಳ ತಿದ್ದುಪಡಿ ಆದೇಶದ ವಿರುದ್ಧ ಮೇ 29ರಂದೇ ಉದ್ಯಮಬಾಗದ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್’ನ ವತಿಯಿಂದ ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ ಹಾಗೂ ಆಡಳಿತ ಮಂಡಳಿ ನಿರ್ದೇಶಕ ಎಂ.ಕೆ. ಹೆಗಡೆ ನೇತೃತ್ವದಲ್ಲಿ ನೂರಾರು ವರ್ತಕರು ಮತ್ತು ಕೈಗಾರಿಕೋದ್ಯಮಿಗಳು ಒಗ್ಗೂಡಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾ ಲಿ ನಡೆಸಿ, ಸರ್ಕಾರದ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಸರ್ಕಾರದ ನೀತಿಯ ವಿರುದ್ಧ ಗುಡುಗಿದ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಅವರು, “ಸರ್ಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಇದ್ದಕ್ಕಿದ್ದಂತೆ 12 ಸಾವಿರ ರೂಪಾಯಿಗಳಿಂದ 20 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಿದೆ. ಸರ್ಕಾರದ ಈ ಅವೈಜ್ಞಾನಿಕ ನಿರ್ಧಾರದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳುತ್ತಿದೆ. ಈಗಾಗಲೇ ಹಲವು ಸಣ್ಣಪುಟ್ಟ ಕೈಗಾರಿಕೆಗಳು ಆರ್ಥಿಕ ನಷ್ಟದಿಂದ ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಸರ್ಕಾರ ಉದ್ಯಮಿಗಳ ಹಿತದೃಷ್ಟಿಯಿಂದ ಈ ವೇತನ ಹೆಚ್ಚಳದ ನಿರ್ಧಾರವನ್ನು ತಕ್ಷಣವೇ ಮರು ಪರಿಶೀಲಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಕಾರ್ಮಿಕ ಕನಿಷ್ಠ ವೇತನವನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿರುವುದನ್ನು ನಾವು ವಿರೋಧಿಸುತ್ತೇವೆ. ಯಾವುದೇ ರಾಜ್ಯದಲ್ಲಿ ಇಷ್ಟು ಪ್ರಮಾಣದಲ್ಲಿ ವೇತನವನ್ನು ಹೆಚ್ಚಿಸಿಲ್ಲ. ಈ ಹಿಂದೆಯೂ ಕಾನೂನಾತ್ಮಕ ಹೋರಾಟ ನಡೆಸಲಾಗಿತ್ತು. ಕಾರ್ಮಿಕರ ಹಿತದಲ್ಲಿ ಸರ್ಕಾರ ನಿರ್ಣಯವನ್ನು ಕೈಗೊಳ್ಳಬೇಕು. ಈಗಾಗಲೇ ಎಲ್ಲ ತೆರಿಗೆಗಳನ್ನು ಹೆಚ್ಚಿಸಿದ್ದು, ಸಣ್ಣ ಕೈಗಾರಿಕೆದಾರರು ತೊಂದರೆಯಲ್ಲಿದ್ದಾರೆ ಎಂದರು.
ಸರ್ಕಾರಗಳು ವಿವಿಧ ವರ್ಗಕ್ಕೆ ಭಾಗ್ಯಗಳನ್ನು ಜಾರಿಗೆ ಮಾಡುತ್ತಿದ್ದು, ಕಾರ್ಮಿಕರಿಗೂ ಭಾಗ್ಯಗಳನ್ನು ಜಾರಿಗೊಳಿಸಿ ಸುಮಾರು 5 ಸಾವಿರ ರೂಪಾಯಿ ನೀಡಲಿ. ದೊಡ್ಡ ಕಂಪನಿಗಳನ್ನು ಗಮನದಲ್ಲಿಟ್ಟುಕೊಂಡು ಅವೈಜ್ಞಾನಿಕ ನಿರ್ಣಯವನ್ನು ಸರ್ಕಾರ ಕೈಗೊಳ್ಳಬಾರದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ, ನಮ್ಮ ರಾಜ್ಯದಲ್ಲಿ ಗರಿಷ್ಠ ವೇತನವನ್ನು ನೀಡಲಾಗುತ್ತಿದೆ ಸತೀಶ್ ಕುಲಕರ್ಣಿ ಹಾಗೂ ಇನ್ನುಳಿದವರು ಹೇಳಿದರು.
ಈ ವೇಳ ಚೇಂಬರ್ ಆಫ್ ಕಾಮರ್ಸ್’ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
