ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದ್ದ ಭೀಮಾತೀರದ ಆರು ಜನರ ಕಗ್ಗೋಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 11 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಇಂದು ಪ್ರಮುಖ ಆರೋಪಿ ಅಪ್ಪುಗೌಡ ಪಾಟೀಲ್ ಸೇರಿದಂತೆ ಮತ್ತೂ ಆರು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳೆದ ಮೇ 29ರಂದು ಜಮೀನು ವಿವಾದದ ಹಿನ್ನೆಲೆಯಲ್ಲಿ ಗೋವಿಂದಪುರ ಗ್ರಾಮದಲ್ಲಿ ಭೀಕರ ಹತ್ಯಾಕಾಂಡ ನಡೆದಿತ್ತು. ಘಟನೆಯಲ್ಲಿ ಚಂದ್ರಕಾಂತ ನಿರಾಳೆ, ಅವರ ಪುತ್ರರಾದ ಸಮರ್ಥ ಹಾಗೂ ರಾಹುಲ್, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ ಮತ್ತು ಶಬ್ಬೀರ್ ಅತ್ತಾರ್ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.


ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಜೂನ್ 1ರಂದು ಪ್ರಮುಖ ಆರೋಪಿ ಕಲ್ಲನಗೌಡ ಪಾಟೀಲ್ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿದ್ದರು. ತನಿಖೆ ಮುಂದುವರಿದ ವೇಳೆ ಇನ್ನೂ ಹಲವರ ಪಾತ್ರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ಅಪ್ಪುಗೌಡ ಪಾಟೀಲ್ ಸೇರಿದಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಮೂಲಕ ಕಗ್ಗೋಲೆ ಪ್ರಕರಣದಲ್ಲಿ ಇದುವರೆಗೆ ಒಟ್ಟು 17 ಆರೋಪಿಗಳನ್ನು ಬಂಧಿಸಿದಂತಾಗಿದೆ.
ಉಳಿದ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳು ಜಾಲ ಬೀಸಿದ್ದು, ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಮುಂದುವರಿದಿದೆ.
