Chikkodi

ಪಾಲಕರು ಮಕ್ಕಳನ್ನು ಇತರರೊಂದಿಗೆ ಹೋಲಿಸಿ ಅನಗತ್ಯ ಒತ್ತಡ ಹೇರಬಾರದು:ಮಹಾಂತೇಶ ಕವಟಗಿಮಠ

Share

“ಮಹಾನಗರಗಳಲ್ಲಿ ಸಿಗುವ ಉನ್ನತ ಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಒದಗಿಸುವ ನಿಟ್ಟಿನಲ್ಲಿ ಕೆ.ಎ.ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ತಿಳಿಸಿದರು.

​ಚಿಕ್ಕೋಡಿ ಕೆ.ಎಲ್.ಇ ಸಂಸ್ಥೆಯ ಸ್ವತಂತ್ರ ಪಿಯು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ೨೦೨೬ರ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಆಗಮನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

​ಪಿಯುಸಿ ಜೀವನದ ಪ್ರಮುಖ ಘಟ್ಟವಾಗಿದ್ದು, ಪಾಲಕರು ಮಕ್ಕಳನ್ನು ಇತರರೊಂದಿಗೆ ಹೋಲಿಸಿ ಅನಗತ್ಯ ಒತ್ತಡ ಹೇರಬಾರದು. ಮಕ್ಕಳಿಗೆ ಮೊಬೈಲ್ ನೀಡಬೇಡಿ ಹಾಗೂ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕೊಡಿಸಬೇಡಿ.
​ಮಕ್ಕಳ ಸ್ನೇಹ ವಲಯದ ಮೇಲೆ ಗಮನವಿರಲಿ ಹಾಗೂ ಪೋಷಕರು ಕಾಲಕಾಲಕ್ಕೆ ಕಾಲೇಜಿಗೆ ಭೇಟಿ ನೀಡುತ್ತಿರಬೇಕು ಎಂದರು.

​ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಮಾತನಾಡಿ, ಬೆಂಗಳೂರಿನಂತಹ ನಗರಗಳಲ್ಲಿ ಸಿಗುವ ದುಬಾರಿ ಶಿಕ್ಷಣವನ್ನು ಕೆ.ಎಲ್.ಇ ಸಂಸ್ಥೆಯು ಚಿಕ್ಕೋಡಿಯಲ್ಲಿ ಕಡಿಮೆ ಶುಲ್ಕದಲ್ಲಿ ನೀಡುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಂಡು ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜೆಇಇ (JEE), ನೀಟ್ (NEET) ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
​ಕಾರ್ಯಕ್ರಮದಲ್ಲಿ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ದರ್ಶನ ಬಿಳೂರೆ, ವಿನೋದ ಸಾವಂತಗೌಡರ, ಸಚಿನ್ ಮೆಕ್ಕಳಕಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪಿ. ವೆಂಕಟ ರೆಡ್ಡಿ ಸ್ವಾಗತಿಸಿದರು, ಮಹೇಶ ಸನಿಯವರ ಪ್ರಾರ್ಥಿಸಿದರು, ಶಿವಾನಂದ ಉನ್ಹಾಳೆ ಅತಿಥಿಗಳನ್ನು ಪರಿಚಯಿಸಿದರು. ಸುಜೀತ ಚಂದರಗಿ ಮತ್ತು ಕುಮಾರಿ ಋತು ಕರಾಡೆ ಕಾರ್ಯಕ್ರಮ ನಿರೂಪಿಸಿದರೆ, ಪವನಕುಮಾರ ವಂದಿಸಿದರು.

Tags:

error: Content is protected !!