BELAGAVI

ಬೆಳಗಾವಿಯಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರಿ ಜಾಗ ಅಕ್ರಮ ಒತ್ತುವರಿ: ತನಿಖೆಗೆ ಕರವೇ ಆಗ್ರಹ

Share

ಬೆಳಗಾವಿ ನಗರದ ತಿಲಕವಾಡಿ ಹಾಗೂ ಶುಕ್ರವಾರ ಪೇಟೆಯಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಕಟ್ಟಡ ನಿರ್ಮಿಸಿ, ಅದೇ ಆಸ್ತಿಯ ಮೇಲೆ ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಪಡೆದಿರುವ ಗಂಭೀರ ಆರೋಪವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ದಂಧೆ ಹೆಚ್ಚಾಗಿದ್ದು, ಇದೀಗ ತಿಲಕವಾಡಿ ಮತ್ತು ಶುಕ್ರವಾರ ಪೇಟೆ ಭಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಅನುಮತಿ ಇಲ್ಲದೆ ಅಲ್ಲಿ ವಾಣಿಜ್ಯ ಕಾಂಪ್ಲೆಕ್ಸ್ ಹಾಗೂ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಈ ಸರ್ಕಾರಿ ಸ್ವತ್ತನ್ನು ತಮ್ಮ ವೈಯಕ್ತಿಕ ಹೆಸರಿಗೆ ಮಾಡಿಕೊಂಡು ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆಯಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಬೆಳಗಾವಿ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದೆ.

ಒತ್ತುವರಿಯಾಗಿರುವ ಸರ್ವೇ ನಂಬರ್ 78/1 ರ ವಿವಿಧ ಹಿಸ್ಸಾಗಳ ಸಂಪೂರ್ಣ ವಿವರಗಳನ್ನು ನೀಡಿರುವ ಸಂಘಟನೆಯು, ಈ ಬೃಹತ್ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಒತ್ತುವರಿದಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಸರ್ಕಾರಿ ಆಸ್ತಿಯನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಸಾಲ ಪಡೆದ ವಂಚಕರನ್ನು ಪತ್ತೆಹಚ್ಚಲು ಸೂಕ್ಷ್ಮ ತನಿಖೆ ನಡೆಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ. ಈ ಒತ್ತುವರಿ ತನಿಖೆಯು ಈಗ ಜಿಲ್ಲಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

Tags:

error: Content is protected !!