ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಶಾಸಕರ ತೀವ್ರ ವಿರೋಧದ ನಡುವೆಯೂ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಶಿಫಾರಸು ಪತ್ರದ ಆಧಾರದ ಮೇಲೆ ನಿಯಮಬಾಹಿರವಾಗಿ ಎಂಎಸ್‌ಐಎಲ್ ಮಳಿಗೆಗಳನ್ನು ಆರಂಭಿಸುವ ಮೂಲಕ ರಾಜ್ಯ ಸರ್ಕಾರವು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದಲಿತ ಮುಖಂಡ ಸುರೇಶ ತಳವಾರ್ ಗಂಭೀರವಾಗಿ ಆರೋಪಿಸಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿರುವ ನನ್ನ ‘ಜಿಟಿ ಬಾರ್ ಆ್ಯಂಡ್ ರೆಸ್ಟೋರೆಂಟ್’ ಪಕ್ಕದ ಸಾರಾಪುರ ಮತ್ತು ಅವರಗೋಳ ಗ್ರಾಮಗಳಲ್ಲಿ ನಿಯಮಬಾಹಿರವಾಗಿ ಎಂಎಸ್‌ಐಎಲ್ ಮಳಿಗೆಗಳನ್ನು ಆರಂಭಿಸಲಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಶಾಸಕರು ಲಿಖಿತವಾಗಿ ವಿರೋಧ ವ್ಯಕ್ತಪಡಿಸಿದ್ದರೂ ಸಹ ಮಳಿಗೆಗಳನ್ನು ತೆರೆಯಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ನೀಡಿದ್ದಾರೆ, ಹಾಗಾಗಿ ಅನುಮತಿ ಕೊಟ್ಟಿದ್ದೇವೆ ಎನ್ನುತ್ತಾರೆ. ಉಸ್ತುವಾರಿ ಸಚಿವರ ಇಂತಹ ದಲಿತ ವಿರೋಧಿ ನೀತಿ ನನ್ನನ್ನು ಆರ್ಥಿಕವಾಗಿ ಹತ್ತಿಕ್ಕಲು ನಡೆಸಿರುವ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಬಾರ್‌ನ ಕೇವಲ ೩ ರಿಂದ ೪ ಕಿಲೋಮೀಟರ್ ವ್ಯಾಪ್ತಿಯ ಸುಲ್ತಾನಪುರ, ಅವರಗೋಳ ಹಾಗೂ ಸಾರಾಪುರ ಕ್ರಾಸ್‌ನಲ್ಲಿ ಎಂಎಸ್‌ಐಎಲ್ ಮಳಿಗೆಗಳನ್ನು ತೆರೆಯಲಾಗಿದೆ.ವಿಶೇಷವೆಂದರೆ, ಎಸ್‌ಟಿ ವರ್ಗಕ್ಕೆ ಮಂಜೂರಾಗಿದ್ದ ಅಕ್ಕಿವಾಟ ಗ್ರಾಮದ ಎಂಎಸ್‌ಐಎಲ್ ಮಳಿಗೆಯನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಿ ಸಾರಾಪುರ ಕ್ರಾಸ್‌ಗೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಸ್ಥಳೀಯ ಶಾಸಕ ನಿಖಿಲ್ ಕತ್ತಿ ಅವರಾಗಲಿ ಅಥವಾ ಗ್ರಾಮ ಪಂಚಾಯಿತಿಯಾಗಲಿ ಯಾವುದೇ ಒಪ್ಪಿಗೆ ನೀಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಉದಯ ಹುಕ್ಕೇರಿ, ವಕೀಲರಾದ ಸುದರ್ಶನ ತಮ್ಮಣ್ಣವರ, ಮುತ್ತಣ್ಣಾ ರಾಯಣ್ಣವರ, ರಾಘವೇಂದ್ರ ಸನದಿ, ಅಪ್ಪಾಸಾಬ ಬ್ಯಾಳಿ, ರಾವಸಾಬ ಫಕೀರೆ, ಆನಂದ ಅರಬಳ್ಳಿ, ಶ್ರೀಕಾಂತ ತಳವಾರ, ಎಂ.ಆರ್.ಮುನ್ನೋಳಿಕರ, ವಿದ್ಯಾಧರ ಚಿತಾಳೆ, ದೀಪಕ ವೀರಮುಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
