Dharwad

ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ, ಕಚೇರಿ ಮೇಲೆ ಧಾರವಾಡದಲ್ಲಿ ಲೋಕಾಯುಕ್ತ ದಾಳಿ

Share

ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆಯೇ ಧಾರವಾಡದಲ್ಲಿ ಭ್ರಷ್ಟ ಅಧಿಕಾರಿಯೊಬ್ಬರ ಆಸ್ತಿಪಾಸ್ತಿ ಕಂಡು ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರರ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

ಧಾರವಾಡದ ಇಸ್ಕಾನ್ ಟೆಂಪಲ್ ಬಳಿ ಇರುವ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರರಾದ ಸುದೀಂದ್ರ ಕುಮಾರ್ ಕಳಸ ಅವರ ಮನೆ, ಕಚೇರಿ ಹಾಗೂ ಇವರ ಮಾಲೀಕತ್ವದ ಪಿಜಿ (PG) ಸೇರಿದಂತೆ ಏಕಕಾಲಕ್ಕೆ ಒಟ್ಟು ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭೀಕರ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಅಧಿಕಾರಿಗಳು ಧಾರವಾಡದ ನಿಸರ್ಗ ಲೇಔಟ್ ಬಳಿ ಇರುವ ಸುದೀಂದ್ರ ಅವರ ಬಾಡಿಗೆ ಮನೆಗೆ ಲಗ್ಗೆ ಇಟ್ಟಾಗ ಖುದ್ದು ಭ್ರಷ್ಟ ಅಧಿಕಾರಿಯೇ ಸಿಕ್ಕಿಬಿದ್ದಿದ್ದಾರೆ. ವಿಶೇಷವೆಂದರೆ, ತಮಗೆ ಸೇರಿದ ಸ್ವಂತ ಮನೆಯನ್ನು ಬಾಡಿಗೆಗೆ ನೀಡಿ, ತಾವೇ ಬೇರೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಅಧಿಕಾರಿಯ ಕಳ್ಳಾಟ ಸದ್ಯ ಬಯಲಾಗಿದ್ದು, ಕಳೆದ ಮೂರು ಗಂಟೆಗಳಿಂದ ಲೋಕಾ ಸಿಬ್ಬಂದಿ ಮಹತ್ವದ ದಾಖಲೆಗಳು ಹಾಗೂ ಕಡತಗಳ ಪರಿಶೀಲನೆಯನ್ನು ಚುರುಕುಗೊಳಿಸಿದ್ದಾರೆ.

Tags:

error: Content is protected !!