• ಅಂಬ್ಲಿಕೊಪ್ಪ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿ
• ಸ್ಥಳದಲ್ಲೇ ಸವಾರ ಪರಶುರಾಮ ಘೋರ್ಪಡೆ ಸಾವು
• ಗಾಯಗೊಂಡ ಮೂವರು ಜಿಲ್ಲಾ ಆಸ್ಪತ್ರೆಗೆ ದಾಖಲು
• ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರ ಭೇಟಿ
ಧಾರವಾಡ ಜಿಲ್ಲೆಯ ಹಳಿಯಾಳ ರಸ್ತೆಯ ಅಂಬ್ಲಿಕೊಪ್ಪ ಕ್ರಾಸ್ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಅಪಘಾತದ ರಭಸಕ್ಕೆ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ.

ಧಾರವಾಡ ಹಳಿಯಾಳ ರಸ್ತೆಯ ಅಂಬ್ಲಿಕೊಪ್ಪ ಕ್ರಾಸ್ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಅಂಬ್ಲಿಕೊಪ್ಪ ಗ್ರಾಮದ ನಿವಾಸಿ ಪರಶುರಾಮ ಘೋರ್ಪಡೆ ಎಂಬ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಪರಶುರಾಮ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದಲ್ಲಿ ಇತರ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ವಾಹನ ಸವಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆಂಬ್ಯುಲೆನ್ಸ್ ಕರೆಯಿಸಿ, ಗಾಯಾಳುಗಳನ್ನು ಹಾಗೂ ಮೃತದೇಹವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸುವಲ್ಲಿ ನೆರವಾದರು. ಹಠಾತ್ ದುರಂತದಿಂದಾಗಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

