Dharwad

ಜೂ.3 ರಂದು ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾದ ಆಲ್ ಕರ್ನಾಟಕ ಸ್ಟೂಡೆಂಟ್ ಅಸೋಸಿಯೇಷನ್…

Share

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಈ ಹಿಂದೆ ನಡೆದ ಉದ್ಯೋಗಾಕಾಂಕ್ಷಿಗಳ ದಿಢೀರ್ ಪ್ರತಿಭಟನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ‘ಆಲ್ ಕರ್ನಾಟಕ ಸ್ಟೂಡೆಂಟ್ ಅಸೋಸಿಯೇಷನ್’ ಸಿದ್ಧವಾಗಿದ್ದು, ಪೊಲೀಸ್ ಇಲಾಖೆಯ ಅನುಮತಿ ಕೋರಿತ್ತು. ಆದರೆ ಈ ಪ್ರತಿಭಟನೆಗೆ ಪೊಲೀಸ್ ಇಲಾಖೆಯು ಹಲವು ತಾಂತ್ರಿಕ ಕಾರಣಗಳನ್ನು ನೀಡಿ ಬ್ರೇಕ್ ಹಾಕಿದೆ. ಅದರ ಕುರಿತಾದ ಒಂದು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ…

ಕಳೆದ 2025ರ ಸೆಪ್ಟೆಂಬರ್‌ನಲ್ಲಿ ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಬೃಹತ್ ದಿಢೀರ್ ಪ್ರತಿಭಟನೆಯು ದೇಶವ್ಯಾಪಿ ಹಲವು ಚರ್ಚೆಗಳನ್ನು ಹುಟ್ಟುಹಾಕಿತ್ತು. ಇದರ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಈ ಉದ್ಯೋಗಾಕಾಂಕ್ಷಿಗಳ ಹೋರಾಟ ಸದ್ದು ಮಾಡಿ, ಸರ್ಕಾರದ ಬುಡವನ್ನೇ ಅಲುಗಾಡಿಸುವಂತೆ ಮಾಡಿತ್ತು. ಈ ಹೋರಾಟದ ನಂತರ ಹಲವು ಬಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ಯತ್ನಿಸಿದರಾದರೂ, ಅಷ್ಟೊಂದು ಯಶಸ್ವಿಯಾಗಿರಲಿಲ್ಲ.
ಆದರೆ, ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ‘ಆಲ್ ಕರ್ನಾಟಕ ಸ್ಟೂಡೆಂಟ್ ಅಸೋಸಿಯೇಷನ್’ ಸಿದ್ಧವಾಗಿದ್ದು, ಇದರ ಭಾಗವಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಆದರೆ ಈ ಅರ್ಜಿಗೆ ಈಗ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಲವು ಕಾರಣಗಳನ್ನು ನೀಡಿ ಅನುಮತಿಯನ್ನು ಮತ್ತೊಮ್ಮೆ ನಿರಾಕರಿಸಿದ್ದಾರೆ.

ಅಕ್ಸಾ ಸಂಘಟನೆಯು ಜೂನ್ 3ರಂದು ಉದ್ಯೋಗಾಕಾಂಕ್ಷಿಗಳ ಹೋರಾಟ ನಡೆಸಲು ಪೊಲೀಸ್ ಇಲಾಖೆಯ ಅನುಮತಿ ಕೋರಿತ್ತು. ಆದರೆ ಅದಕ್ಕೆ ನಾವು ಅನುಮತಿ ನೀಡಿಲ್ಲ. ಈ ಹಿಂದೆ ಈ ಸಂಘಟನೆಯು ದಿಢೀರನೆ ಉದ್ಯೋಗಾಕಾಂಕ್ಷಿಗಳನ್ನು ಒಟ್ಟುಗೂಡಿಸಿ ಹೋರಾಟ ನಡೆಸಿದಾಗ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದರ ಜೊತೆಗೆ ಈಗ ಮುಚಿಗಿನ್ ಕೌಂಡ್ ಬಳಿ ಹೋರಾಟ ಮಾಡುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕಂಪ್ಲೀಟ್ ಆಗಿ ಎಷ್ಟು ಜನ ಬರುತ್ತಾರೆ, ಎಲ್ಲಿಂದ ಬರುತ್ತಾರೆ, ಮೆರವಣಿಗೆ ಇದೆಯಾ ಅಥವಾ ಇಲ್ಲವೇ, ಎಷ್ಟು ದಿನ ಈ ಹೋರಾಟ ನಡೆಯುತ್ತದೆ ಸೇರಿದಂತೆ ಹಲವು ಪ್ರಮುಖ ಮಾಹಿತಿಗಳು ಅರ್ಜಿಯಲ್ಲಿ ಇಲ್ಲದಿರುವುದರಿಂದ ಸದ್ಯಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಅಕ್ಸಾ ಸಂಘಟನೆಯು ಸರ್ಕಾರಿ ಪೊಲೀಸ್ ಇಲಾಖೆಯ ಪಿಎಸ್‌ಐ, ಎಸ್‌ಡಿಎ, ಎಫ್‌ಡಿಎ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಸುಮಾರು 2 ಲಕ್ಷಕ್ಕೂ ಅಧಿಕ ಹುದ್ದೆಗಳ ಭರ್ತಿಗಾಗಿ ಬೀದಿಗಿಳಿದು ಹೋರಾಟ ಮಾಡಿತ್ತು. ಈ ಹೋರಾಟ ರಾಜಕೀಯ ಪಕ್ಷಗಳ ಬುಡವನ್ನೇ ಒಮ್ಮೆ ಅಲುಗಾಡಿಸುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಆಗಾಗ್ಗೆ ಧಾರವಾಡದಲ್ಲಿ ಇತರೆ ಸಂಘಟನೆಗಳ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಹೋರಾಟಕ್ಕೆ ಮುಂದಾಗಲು ಯತ್ನಿಸುತ್ತಲೇ ಇದ್ದಾರೆ. ಈ ವೇಳೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸುತ್ತಲೇ ಬಂದಿದೆ.
ಈಗ ಮತ್ತೊಮ್ಮೆ ಅಕ್ಸಾ ಸಂಘಟನೆ ಜೂನ್ 3ರ ಹೋರಾಟಕ್ಕೆ ಪೊಲೀಸ್ ಇಲಾಖೆಯ ಅನುಮತಿ ಕೋರಿದ್ದು, ಇದಕ್ಕೂ ಈಗ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಆದರೆ ಪೊಲೀಸ್ ಇಲಾಖೆಯ ಈ ನಡೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ನಮ್ಮ ಹೋರಾಟದ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ಇಲಾಖೆಯ ಮೊರೆ ಹೋಗಿದೆ ಎನ್ನುವುದು ಹೋರಾಟಗಾರರ ಗಂಭೀರ ಆರೋಪವಾಗಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿನ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ, ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಧಾರವಾಡ ಉದ್ಯೋಗಾಕಾಂಕ್ಷಿಗಳ ಬೃಹತ್ ಹೋರಾಟ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈಗ ಮತ್ತೊಮ್ಮೆ ಉದ್ಯೋಗಾಕಾಂಕ್ಷಿಗಳನ್ನು ಕರೆದುಕೊಂಡು ಹೋಗಲು ಆಲ್ ಕರ್ನಾಟಕ ಸ್ಟೂಡೆಂಟ್ ಅಸೋಸಿಯೇಷನ್ ಮುಂದಾಗಿದೆ. ಆದರೆ ಈ ಹೋರಾಟಕ್ಕೆ ಈಗ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಬ್ರೇಕ್ ನೀಡಿದೆ. ಈ ಎಲ್ಲದರ ಮಧ್ಯೆ ಉದ್ಯೋಗಾಕಾಂಕ್ಷಿಗಳ ಮುಂದಿನ ನಡೆ ಈಗ ತೀವ್ರ ಕುತೂಹಲ ಮೂಡಿಸಿದ್ದು, ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಹೋರಾಟ ನಡೆಯುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!