Belagavi

ಬೆಳಗಾವಿಯಲ್ಲಿ ‘ಕರ್ನಾಟಕ ರಕ್ಷಣಾ ಟೈಗರ್ಸ್’ ವಿನೂತನ ಸಂಘಟನೆಗೆ ಚಾಲನೆ: ರಾಣಿ ಚನ್ನಮ್ಮ ಪುತ್ಥಳಿಗೆ ರಾಜ್ಯಾಧ್ಯಕ್ಷ ಹರೀಶ್ ಮಾಲಾರ್ಪಣೆ

Share

ಕರ್ನಾಟಕದ ನೆಲ-ಜಲ-ಭಾಷೆ-ಸಂಸ್ಕೃತಿ ರಕ್ಷಣೆ ಹಾಗೂ ಸಾಮಾಜಿಕ ಸೇವೆಯನ್ನು ಪ್ರಮುಖ ಧ್ಯೇಯವಾಗಿಟ್ಟುಕೊಂಡು ‘ಕರ್ನಾಟಕ ರಕ್ಷಣಾ ಟೈಗರ್ಸ್’ ಎಂಬ ವಿನೂತನ ಸಂಘಟನೆಗೆ ಬೆಳಗಾವಿಯ ಕನ್ನಡ ಭವನದಲ್ಲಿ ಭಾನುವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಈ ಮೊದಲು ಈ ಸಂಘಟನೆ ಕರ್ನಾಟಕ ಯುವಸೇನೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈಗ ಕರ್ನಾಟಕ ರಕ್ಷಣಾ ಟೈಗರ್ಸ್’ ಹೆಸರಿನಲ್ಲಿ ಹೊಸದಾಗಿ ಸಂಘಟನೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಹರೀಶ್ ಆರ್., ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ ಸೇರಿದಂತೆ ನಗರ, ತಾಲ್ಲೂಕುಗಳ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಅಲ್ಲಿಂದ ಕನ್ನಡ ಭವನದವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಹರೀಶ್ ಆರ್. ಬೆಳಗಾವಿ ಗಂಡುಗಲಿಗಳ ನಾಡು, ಇಂಥ ನಾಡಿನಲ್ಲಿ ನಮ್ಮ ಸಂಘಟನೆಗೆ ಚಾಲನೆ ನೀಡಿದ್ದೇವೆ. ಕಳೆದ 25 ವರ್ಷಗಳಿಂದ ಕನ್ನಡ ನಾಡು, ನುಡಿ, ಜಲ ರಕ್ಷಣೆಯಲ್ಲಿ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗ ಹೊಸ ಸಂಘಟನೆ ಮೂಲಕ ಮತ್ತಷ್ಟು ಪರಿಣಾಮಕಾರಿ ಆಗಿ ಹೋರಾಡಲು ನಾವು ಸಜ್ಜಾಗಿದ್ದೇವೆ ಎಂದರು.

ಗಡಿ ವಿವಾದ ವಿಚಾರ, ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಬೇಕು. ಆ ನಿಟ್ಟಿನಲ್ಲೂ ನಾವು ಹೋರಾಟ ಮಾಡುತ್ತೇವೆ. ನೆಲ, ಜಲ, ಭಾಷೆಗೆ ಧಕ್ಕೆ ಬಂದರೆ ನಾವು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹರೀಶ ಆರ್. ಎಚ್ಚರಿಸಿದರು.

Tags:

error: Content is protected !!