ಸ್ಥಳೀಯ ಸರ್ಕಾರಿ ನೌಕರರ ಸಂಘದ ಕಟ್ಟಡದ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಹೆಚ್ಚುವರಿಯಾಗಿ 1 ಕೋಟಿ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಿ.ಎ.ಕುಂಬಾರ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ನಿರಂತರ ಪ್ರಯತ್ನ ಮತ್ತು ವಿಶೇಷ ಕಾಳಜಿಯಿಂದಾಗಿ ಈ ಬೃಹತ್ ಮೊತ್ತದ ಅನುದಾನ ಬಿಡುಗಡೆಯಾಗಿದೆ. ಈ ಹಿಂದೆ ಕೂಡ ಸಚಿವರು ಇದೇ ಕಟ್ಟಡಕ್ಕೆ 1 ಕೋಟಿ 50 ಲಕ್ಷ ರೂಪಾಯಿ ಅನುದಾನವನ್ನು ನೀಡಿದ್ದರು. ಇದೀಗ ನೌಕರರ ಭವನದ ಸುಸಜ್ಜಿತ ನಿರ್ಮಾಣಕ್ಕಾಗಿ ಮತ್ತೆ ಹೆಚ್ಚುವರಿಯಾಗಿ 1 ಕೋಟಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಹಾಗೂ ನೌಕರರ ಸಂಘದ ಸ್ವಂತ ಕಟ್ಟಡದ ಅಗತ್ಯವನ್ನು ಮನಗಂಡು ದೊಡ್ಡ ಮೊತ್ತದ ಅನುದಾನ ಒದಗಿಸಿಕೊಟ್ಟಿರುವ ಸಚಿವ ಸತೀಶ ಜಾರಕಿಹೊಳಿ ಅವರಿಗೆ ನಮ್ಮ ಸಂಘದ ಪರವಾಗಿ ಹಾಗೂ ಸಮಸ್ತ ಸರ್ಕಾರಿ ನೌಕರರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಈ ಹೆಚ್ಚುವರಿ ಅನುದಾನದಿಂದಾಗಿ ಚಿಕ್ಕೋಡಿಯ ನೌಕರರ ಭವನದ ಕಾಮಗಾರಿಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ನೌಕರರ ವಿವಿಧ ಸಾಮಾಜಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೈಟೆಕ್ ಸೌಲಭ್ಯ ದೊರೆತಂತಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
